ಪುಣೆ: ಡಾ. ನರೇಂದ್ರ ಪರ್ದೇಶಿ ನೇತೃತ್ವದ ಪಶು ವೈದ್ಯರ ತಂಡ 12 ವಾರದ ಶ್ವಾನದ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಚಮಚವನ್ನು ಪುಣೆಯಲ್ಲಿರುವ 'ಸ್ಮಾಲ್ ಅನಿಮಲ್ ಕ್ಲಿನಿಕ್'ನಲ್ಲಿ ಯಶಸ್ವಿಯಾಗಿ ತೆಗೆದಿದೆ. ಚಮಚ ನುಂಗಿದ್ದ ಪರಿಣಾಮ ಹೊಟ್ಟೆಯಲ್ಲಿ ಹುಣ್ಣಾಗಿದ್ದರಿಂದ, ಶ್ವಾನದ ಆಹಾರ ಸೇವಿಸಲು ಹೆಣಗಾಡುತ್ತಿತ್ತು.
ಪುಣೆ ಮೂಲದ ಶೇಖರ್ ಎನ್ನುವವರ ಮನೆಯಲ್ಲಿದ್ದ 'ಗೋಲ್ಡನ್ ರಿಟ್ರೈವರ್' ತಳಿಯ ಹೆಣ್ಣು ಶ್ವಾನ 'ನೋರಾ', ಮಾರ್ಚ್‌ನಲ್ಲಿ ಐಸ್‌ಕ್ರೀಂ ಚಮಚವನ್ನು ಆಕಸ್ಮಿಕವಾಗಿ ನುಂಗಿತ್ತು. ಅಲ್ಲಿಯವರೆಗೆ ಅದು ಆರೋಗ್ಯಯುತವಾಗಿ ಮತ್ತು ಕ್ರಿಯಾಶೀಲವಾಗಿತ್ತು.
ಚಮಚ ನುಂಗಿ ನೋವಿನಿಂದ ಬಳಲುತ್ತಿದ್ದ ಶ್ವಾನವನ್ನು ಕೂಡಲೇ ಸಮೀಪದ ಪಶು ಆಸ್ಪತ್ರೆಗೆ ಕರೆದೊಯ್ದು ಎಕ್ಸ್-ರೇ ತಪಾಸಣೆ ಮಾಡಿಸಲಾಗಿತ್ತು. ಪರೀಕ್ಷಿಸಿದ ಅಲ್ಲಿನ ವೈದ್ಯರು, ಶ್ವಾನ ಶೀಘ್ರ ಗುಣಮುಖವಾಗಲಿದೆ. ಎಕ್ಸ್-ರೇ ವರದಿ ಪ್ರಕಾರ ಶ್ವಾನದ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಆದರೆ, ನೋರಾ ಇದ್ದಕ್ಕಿದ್ದಂತೆ ಆಹಾರ ಸೇವಿಸುವುದನ್ನು ನಿಲ್ಲಿಸಿತ್ತು ಮತ್ತು ಮೊದಲಿನಂತೆ ಚಟುವಟಿಕೆಯಿಂದ ಇರದೆ ಮಂಕಾಗಿತ್ತು. ಅದಾದ ಬಳಿಕ ಶೇಖರ್ ಕುಟುಂಬ ಡಾ. ಪರ್ದೇಶಿ ಅವರನ್ನು ಸಂಪರ್ಕಿಸಿ ಚಿಕಿತ್ಸೆ ಮಾಡಿಸಿತು.
ಶಸ್ತ್ರಚಿಕಿತ್ಸೆ ಬಳಿಕ ಮಾತನಾಡಿರುವ ಡಾ. ಪರ್ದೇಶಿ, 'ಶ್ವಾನವನ್ನು ಕರೆತಂದಾಗ ಅದರ ಸ್ಥಿತಿ ಗಂಭೀರವಾಗಿತ್ತು. ನಿತ್ರಾಣಗೊಂಡು ಬಡಕಲಾಗಿತ್ತು. ಹೊಟ್ಟೆಯಲ್ಲಿ ಹುಣ್ಣಾಗಿದ್ದರಿಂದ ಆಹಾರ ಸೇವಿಸಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಮಾರ್ಚ್ 29ರಂದು ಗ್ಯಾಸ್ಟ್ರೋಸ್ಕೋಪಿಗೆ ಒಳಪಡಿಸಲು ನಿರ್ಧರಿಸಲಾಯಿತು. ಅದರಂತೆ, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಪೂರ್ವ ತಯಾರಿ ನಡೆಸಲಾಯಿತು. ಶಸ್ತ್ರ ಚಿಕಿತ್ಸೆಗೂ ಮುನ್ನ ಶ್ವಾನದ ಸಂಪೂರ್ಣ ತಪಾಸಣೆ ನಡೆಸಿ, ಅರವಳಿಕೆ ನೀಡಲಾಯಿತು' ಎಂದು ತಿಳಿಸಿದ್ದಾರೆ.
ಮುಂದುವರಿದು, 'ಗ್ಯಾಸ್ಟ್ರೋಸ್ಕೊಪಿ ನಡೆಸುವಾಗ, ಕ್ಯಾಮೆರಾ ಮತ್ತು ಲೈಟ್ ಒಳಗೊಂಡ ಗ್ಯಾಸ್ಟ್ರೋಸ್ಕೋಪ್ ಅಥವಾ ಎಂಡೋಸ್ಕೋಪ್ (ಉದ್ದನೆಯ ಮತ್ತು ಸುಲಭವಾಗಿ ಬಾಗುವಂತಹ ಟ್ಯೂಬ್) ಅನ್ನು ಹೊಟ್ಟೆಯ ಒಳಗೆ ಹಾಕಲಾಯಿತು. ಬಳಿಕ ಹೊಟ್ಟೆಯಲ್ಲಿದ್ದ ಚಮಚವನ್ನು ಟ್ಯೂಬ್ ಮೂಲಕ ಕಳುಹಿಸಿದ್ದ ಸಣ್ಣ ಕತ್ತರಿಯಂತಹ ಸಾಧನದ ಸಹಾಯದಿಂದ ಹೊರತೆಗೆಯಲಾಯಿತು. ಈ ಪ್ರಕ್ರಿಯೆಗೆ ದೇಹದ ಯಾವುದೇ ಭಾಗವನ್ನು ಕತ್ತರಿಸುವ ಅಥವಾ ಛೇದಿಸುವ ಅವಶ್ಯಕತೆ ಇಲ್ಲ. ಸುಮಾರು 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಿತು. ಅದೇ ದಿನ ಶ್ವಾನವನ್ನು ಮನೆಗೆ ಕಳುಹಿಸಲಾಯಿತು' ಎಂದೂ ಹೇಳಿದ್ದಾರೆ.
'ನೋರಾ, ಐಸ್‌ಕ್ರೀಂ ಸೇವಿಸುವ ಪ್ಲಾಸ್ಟಿಕ್ ಚಮಚವನ್ನು ಆಕಸ್ಮಿಕವಾಗಿ ನುಂಗಿದ್ದರಿಂದ ಆತಂಕವಾಗಿತ್ತು. ಅವಳು (ನೋರಾ) ಆಹಾರ ಸೇವಿಸುವುದನ್ನು ನಿಲ್ಲಿಸಿ ಮಂಕಾಗಿದ್ದಳು. ಅತ್ತಿಂದಿತ್ತ ಚಲಿಸದೆ ಒಂದೇ ಜಾಗದಲ್ಲಿ ಉಳಿದುಬಿಟ್ಟಿದ್ದಳು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಚಟುವಟಿಕೆಯಿಂದ ಇದ್ದಾಳೆ' ಎಂದು ಶೇಖರ್ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.