ಕಾಸರಗೋಡು: ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿ ಕಾಂಗ್ರೆಸ್ ಕಾಂಞಂಗಾಡ್ ಬ್ಲಾಕ್ ಸಮಿತಿ ಅಧ್ಯಕ್ಷ ಕೊವ್ವಲ್‍ಪಲ್ಲಿ ನಿವಾಸಿ ಡಿ.ವಿ ಬಾಲಕೃಷ್ಣನ್ ದಾರುಣವಾಗಿ ಮೃತಪಟ್ಟಿದ್ದಾರೆ. ಟ್ಯೂಶನ್ ತರಗತಿಗೆ ತೆರಳುತ್ತಿದ್ದ ಮೊಮ್ಮಗ ನಿಹಾಲ್‍ನನ್ನು ಸ್ಕೂಟರ್‍ನಲ್ಲಿ ಮನೆಗೆ ಕರೆತರುತ್ತಿದ್ದಾಗ, ಕಾಞಂಗಾಡು ಕೊವ್ವಲ್‍ಪಲ್ಲಿಯಲ್ಲಿ ವಿದ್ಯುತ್ ಕಂಬದಿಂದ ಜೋತುಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಈ ದುರ್ಘಟನೆ ನಡೆದಿದೆ. ಈ ಸಂದರ್ಭ ಮೊಮ್ಮಗ ನಿಹಾಲ್ ಸ್ಕೂಟರ್‍ನಿಂದ ಎಸೆಯಲ್ಪಟ್ಟು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಶಬ್ಧ ಕೇಳಿದ ಸ್ಥಳೀಯರು ಆಗಮಿಸಿ ತೀವ್ರವಾಗಿ ಗಾಯಗೊಂಡ ಬಾಲಕೃಷ್ಣನ್ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲಿಲ್ಲ. ಅವರು ಕಾಞಂಗಾಡ್‍ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಲ್ಯಾಬ್ ಉದ್ಯೋಗಿಯಾಗಿ ಸೇವೆಯಿಂದ ನಿವೃತ್ತರಾಗಿದ್ದು, ನಂತರ ಪೂರ್ಣಾವಧಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಹೊಸದುರ್ಗ ಸರ್ವೀಸ್ ಬ್ಯಾಂಕ್ ನ ಮಾಜಿ ನಿರ್ದೇಶಕರಾಗಿದ್ದರು. ಮೃತದೇಹವನ್ನು ಗುರುವಾರ ಹೊಸದುರ್ಗ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ನಂತರ ಅಂತ್ಯ ಸಂಸ್ಕಾರ ನಡೆಸಲಾಯಿತು.