ಯುಗ ಮತ್ತು ಆದಿ ಇವು ಸಂಸ್ಕøತ ಪದಗಳು. ಯುಗ ಎಂದರೆ ಕಾಲಮಾನ ಆದಿ ಎಂದರೆ ಪ್ರಾರಂಭ. ಪೌರಾಣಿಕ ಹಿನ್ನೆಲೆಯನ್ನು ನೋಡಿದಾಗ ಬ್ರಹ್ಮ ದೇವನು ಚೈತ್ರ ಮಾಸದ ಪಾಡ್ಯದಂದು ಇಡೀ ವಿಶ್ವವನ್ನು ಸೃಷ್ಟಿಸಿದನೆಂದು ಈ ವಿಶ್ವದ ಕಾಲ ಗಣನೆಗೆ ಗ್ರಹ, ನಕ್ಷತ್ರ , ವರ್ಷಗಳನ್ನು ಆರಂಭಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಐತಿಹಾಸಿಕ ಹಿನ್ನೆಲೆಯನ್ನು ನೋಡುವುದಾದರೆ ರಾಜ ಚೈತ್ರ ಶುದ್ಧ ಪಾಡ್ಯಮಿಯಂದು ಸಿಂಹಾಸನಾರೂಢನಾದನು. ಅಂದಿನಿಂದ ಶಾಲಿ ವಾಹನ ಶಕೆ ಪ್ರಾರಂಭವಾಯಿತು ಎಂದು ತಿಳಿದು ಬರುವುದು.
ಯುಗಾದಿಯನ್ನು ಚಂದ್ರಮಾನ ಯುಗಾದಿ ಹಾಗೂ ಸೌರಮಾನ ಯುಗಾದಿ ಎಂದು ಎರಡು ಬಗೆಯಲ್ಲಿ ಆಚರಿಸಲಾಗುತ್ತದೆ. ಚಂದ್ರನ ಚಲನೆ ಯನ್ನು ಆಧರಿಸಿ ಮಾಡುವ ಯುಗಾದಿಗೆ ಚಾಂದ್ರಮಾನ ಯುಗಾದಿಯೆಂದೂ ಸೂರ್ಯನು ಮೇಷ ರಾಶಿಗೆ ಪ್ರವೇಶ ಮಾಡುವ ದಿನವನ್ನು ಸೌರಮಾನ ಯುಗಾದಿ ಎಂದು ಕರೆಯುತ್ತೇವೆ.
ಚಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರಪ್ರದೇಶ , ಮಹಾರಾಷ್ಟ್ರ ಹಾಗೂ ಗುಜರಾತ್‍ಗಳಲ್ಲಿ ಆಚರಿಸುತ್ತಾರೆ. ಹಾಗೆಯೇ ಸೌರಮಾನ ಯುಗಾದಿಯನ್ನು ಕರ್ನಾಟಕದ ಕರಾವಳಿ ಭಾಗ, ಕೇರಳ, ತಮಿಳುನಾಡು ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಆಚರಿಸುತ್ತಾರೆ. ಕರ್ನಾಟಕದಲ್ಲಿ ಯುಗಾದಿ ಎಂದರೆ ಮಹಾರಾಷ್ಟ್ರದಲ್ಲಿ ಗುಡಿಪಾಡ್ಯ ಎನ್ನುತ್ತಾರೆ.
ಗುಡಿ ಎಂದರೆ ಧ್ವಜ. ಒಂದು ಕೋಲಿಗೆ ರೇಷ್ಮೆ ವಸ್ತ್ರವನ್ನು ಕಟ್ಟಿ, ಅದಕ್ಕೆ ಬೆಳ್ಳಿಯ ತಂಬಿಗೆ ಇಟ್ಟು ಅದಕ್ಕೆ ಬೇವು ಮಾವಿನಿಂದ ಅಲಂಕರಿಸಿ ಮನೆಯ ಹೊರ ಭಾಗದಲ್ಲಿ ಇಟ್ಟು ಪೂಜಿಸಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಗುಡಿ ಎಂದರೆ ಧ್ವಜ. ಒಂದು ಕೋಲಿಗೆ ರೇಷ್ಮೆ ವಸ್ತ್ರವನ್ನು ಕಟ್ಟಿ, ಅದಕ್ಕೆ ಬೆಳ್ಳಿಯ ತಂಬಿಗೆ ಇಟ್ಟು ಅದಕ್ಕೆ ಬೇವು ಮಾವಿನಿಂದ ಅಲಂಕರಿಸಿ ಮನೆಯ ಹೊರ ಭಾಗದಲ್ಲಿ ಇಟ್ಟು ಪೂಜಿಸಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
ಯುಗಾದಿ ಎಂದಾಕ್ಷಣ ನಮ್ಮ ಕಣ್ಣಮುಂದೆ ಕಾಣುವ ಚಿತ್ರ ಹಸಿರು ತೋರಣ. ಬಣ್ಣದ ರಂಗೋಲಿ, ಅಭ್ಯಂಗ ಸ್ನಾನ, ಬೇವು-ಬೆಲ್ಲ, ಪಂಚಾಂಗ ಶ್ರವಣ, ಹೋಳಿಗೆ ಊಟ, ಹಿರಿಯರ ಆಶೀರ್ವಾದ. ಕೆಲವರು ಯುಗಾದಿಯ ಹಿಂದಿನ ದಿವಸ ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆಯನ್ನು ನೆರವೇರಿಸುತ್ತಾರೆ. ಮನೆಯನ್ನು ಸ್ವಚ್ಛಗೊಳಿಸಿ ಶಾಸ್ತ್ರೋಕ್ತವಾಗಿ ಕಳಸ ಪ್ರತಿಷ್ಠಾಪಿಸಿ ಅವರ ಶಕ್ತ್ಯಾನುಸಾರ ಪೂಜೆ ಮಾಡುವರು.
ಅಮಾವಾಸ್ಯೆಯ ಮಾರನೆ ದಿನ ಯುಗಾದಿ. ಮುಂಜಾನೆಯೇ ಎದ್ದು ಬಾಗಿಲು ಸಾರಿಸಿ ಬಣ್ಣದ ರಂಗೋಲಿಯನ್ನು ಹಾಕಿ ಬಾಗಿಲಿಗೆ ಮಾವಿನ ಎಲೆ ಮತ್ತು ಬೇವಿನ ಎಲೆಯ ತಳಿರು ತೋರಣ ಕಟ್ಟುವರು. ಹಾಗೂ ಮನೆಯವರೆಲ್ಲರೂ ಅಭ್ಯಂಜನ ಎಂದರೆ ಎಣ್ಣೆ ಸ್ನಾನವನ್ನು ಮಾಡುವರು. ಸಾಮಾನ್ಯವಾಗಿ ಹರಳೆಣ್ಣೆ ಸ್ನಾನವನ್ನೂ ಮಾಡುವರು. ಇದು ದೇಹದ ಉಷ್ಣತೆ ಯನ್ನು ಕಡಿಮೆ ಮಾಡುವ ಉದ್ದೇಶ ದಿಂದ ಈ ಪದ್ಧತಿಯು ರೂಢಿಗೆ ಬಂದಿದೆ. ನಂತರ ಹೊಸ ಬಟ್ಟೆಯನ್ನು ಧರಿಸಿ ದೇವರನ್ನು ಅಲಂಕರಿಸಿ ಹೋಳಿಗೆಯೊಂದಿಗೆ ಇತರ ಭಕ್ಷ್ಯಗಳನ್ನು ಮಾಡಿ ದೇವರಿಗೆ ಸಮರ್ಪಿಸಿ ಪೂಜೆ ಮಾಡುವರು. ಬೇವು-ಬೆಲ್ಲ ಸ್ವೀಕರಿಸುವರು. ಜೀವನದ ಕಹಿಗೆ ಬೇವು ಸಂಕೇತವಾದರೆ, ಬೆಲ್ಲ ಸಿಹಿಯ ಸಂಕೇತ. ಇವೆರಡನ್ನೂ ಸಮಾನವಾಗಿ ಸ್ವೀಕರಿಸುತ್ತೇವೆ ಎಂಬುದು ಇದರ ಅರ್ಥ.
ನಂತರ ಪಂಚಾಂಗ ಶ್ರವಣ ಮಾಡವರು. ಈ ವರ್ಷ ಪ್ಲವ ನಾಮ ಸಂವತ್ಸರ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುವುದು ಇದರ ಉದ್ದೇಶ. ಕೆಲವು ಹಳ್ಳಿಗಳಲ್ಲಿ, ದೇವಸ್ಥಾನಗಳಲ್ಲಿ ಅರ್ಚಕರು ಪಂಚಾಂಗ ಪಠನವನ್ನು ಮಾಡಿ ವರ್ಷ ಭವಿಷ್ಯವನ್ನು ಸ್ಥೂಲವಾಗಿ ತಿಳಿಸುವರು. ಸಂಜೆ ದೇವಸ್ಥಾನಗಳಿಗೆ ಹೋಗುವುದು. ಹಿರಿಯರ ಆಶೀರ್ವಾದವನ್ನು ಪಡೆಯುವುದು ಹೀಗೆ ಹೊಸ ವರ್ಷವನ್ನು ಬರಮಾಡಿಕೊಳ್ಳುವರು.