ಕೆವಾಡಿಯಾ : 'ಪರ್ಯಾಯ ವಿವಾದ ಪರಿಹಾರದ ಪರಿಕಲ್ಪನೆಯು (ಎಡಿಆರ್) ಲಕ್ಷಾಂತರ ಜನರಿಗೆ ತಮ್ಮ ಕುಂದು-ಕೊರತೆಗಳನ್ನು ಇತ್ಯರ್ಥಪಡಿಸಲು ವೇದಿಕೆಯನ್ನು ಒದಗಿಸುವ ಮೂಲಕ, ಭಾರತೀಯ ಕಾನೂನಿನ ಚಿತ್ರಣವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ' ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶನಿವಾರ ಹೇಳಿದ್ದಾರೆ.

ಇಲ್ಲಿನ ಸ್ಟ್ಯಾಚ್ಯೂ ಆಫ್ ಯೂನಿಟಿ ಬಳಿ ಆಯೋಜಿಸಿದ್ದ ಮಧ್ಯಸ್ಥಿಕೆ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಪ್ರಕರಣಗಳ ನಿರ್ವಹಣೆಯ ಭಾಗವಾಗಿ ಕಕ್ಷಿದಾರರ ನಡುವೆ ಮಾತುಕತೆ ನಡೆಸುವುದು ಸೇರಿದಂತೆ ಸಂಧಾನ ಪ್ರಕ್ರಿಯೆಯನ್ನು ನ್ಯಾಯಾಲಯಗಳು ಕಡ್ಡಾಯವಾಗಿ ಮಾಡಲು ಯತ್ನಿಸಬೇಕು' ಎಂದು ಸಲಹೆ ನೀಡಿದರು.
'ಲೋಕ ಅದಾಲತ್‌ಗಳು, ಗ್ರಾಮ ನ್ಯಾಯಾಲಯಗಳು, ಮಧ್ಯಸ್ಥಿಕೆ ಮತ್ತು ಸಂಧಾನ ಕೇಂದ್ರಗಳ ಮೂಲಕ ಎಡಿಆರ್ ಪರಿಕಲ್ಪನೆಯು ಲಕ್ಷಾಂತರ ಜನರಿಗೆ ತಮ್ಮ ಕುಂದುಕೊರತೆಗಳನ್ನು ಇತ್ಯರ್ಥಗೊಳಿಸಲು ವೇದಿಕೆಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಇದು ಭಾರತೀಯ ಕಾನೂನಿನ ಚಿತ್ರಣವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ಎಡಿಆರ್ ಭಾರತದ ಸಾಮಾಜಿಕ ನ್ಯಾಯದ ಸಾಧನವಾಗಿ ಹೊರಹೊಮ್ಮಬಹುದು' ಎಂದು ಅವರು ಅಭಿಪ್ರಾಯಪಟ್ಟರು.
'ನ್ಯಾಯ ವಿತರಣಾ ಕಾರ್ಯದಲ್ಲಿ ತೊಡಗಿರುವವರು ಪ್ರಕ್ರಿಯೆಯನ್ನು ಸರಳಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿವಳಿಕೆಯನ್ನೂ ಹೊಂದಿರಬೇಕು' ಎಂದೂ ಅವರು ಸಲಹೆ ನೀಡಿದರು.