ನವದೆಹಲಿ : ಉತ್ತರಾಖಂಡ ರಾಜ್ಯದ ರೂರ್ಕಿ ನಗರದಲ್ಲಿ ಬುಧವಾರ ನಿಗದಿಯಾಗಿರುವ "ಧರ್ಮ ಸಂಸದ್" ಅಥವಾ ಧಾರ್ಮಿಕ ಸಮಾವೇಶಕ್ಕೆ ಹರಿದ್ವಾರ ಜಿಲ್ಲಾಡಳಿತವು ಮಂಗಳವಾರ ಅನುಮತಿ ನಿರಾಕರಿಸಿದೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ರೂರ್ಕಿ ಬಳಿಯ ದಾದಾ ಜಲಾಲ್‌ಪುರ್ ಗ್ರಾಮದ ಐದು ಕಿಲೋಮೀಟರ್ ವ್ಯಾಪ್ತಿಯೊಳಗೆ ಐದಕ್ಕಿಂತ ಹೆಚ್ಚು ಜನರು ಸೇರುವುದನ್ನು ಜಿಲ್ಲಾಡಳಿತವು ನಿಷೇಧಿಸಿದೆ.
ಯಾರಿಗೂ ಅನುಮತಿ ನೀಡದ ಕಾರಣ ಮಹಾಪಂಚಾಯತ್ ತಡೆಯಲು ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಯಾರಾದರೂ ಕಾರ್ಯಕ್ರಮವನ್ನು ಆಯೋಜಿಸಲು ಪ್ರಯತ್ನಿಸಿದರೆ ಅದನ್ನು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ ಎನ್ನುವುದಾಗಿ ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ಸುಮಾರು 200 ಪೊಲೀಸ್ ಸಿಬ್ಬಂದಿ, 100 ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ ಐದು ಕಂಪನಿಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ರಾವತ್ ಹೇಳಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಯಾವುದೇ ದ್ವೇಷ ಭಾಷಣ ಮಾಡದಂತೆ ನೋಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಉತ್ತರಾಖಂಡ ಸರಕಾರಕ್ಕೆ ಎಚ್ಚರಿಕೆ ನೀಡಿದ ಗಂಟೆಗಳ ನಂತರ ಜಿಲ್ಲಾಡಳಿತದಿಂದ ಕ್ರಮವು ಹೊರಬಿದ್ದಿದೆ.
ಡಿಸೆಂಬರ್‌ನಲ್ಲಿ ಹರಿದ್ವಾರ ಹಾಗೂ ದಿಲ್ಲಿಯಲ್ಲಿ ನಡೆದ ಇದೇ ರೀತಿಯ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ "ಯಾವುದೇ ಅಹಿತಕರ ಪರಿಸ್ಥಿತಿ"ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಜವಾಬ್ದಾರರಾಗಿರುತ್ತಾರೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ಹರಿದ್ವಾರ ಮೂಲದ ಹಿಂದುತ್ವ ನಾಯಕ ಹಾಗೂ ಬುಧವಾರದ ಧಾರ್ಮಿಕ ಸಮಾವೇಶದ ಸಂಘಟಕರಲ್ಲಿ ಒಬ್ಬರಾದ ಆನಂದ್ ಸ್ವರೂಪ್ ತಮ್ಮ ಯೋಜನೆಯನ್ನು ಮುಂದುವರಿಸುವುದಾಗಿ 'ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದರು. ತನ್ನ ಜೊತೆಗೆ, "ಧರ್ಮ ಸಂಸದ್" ನ ಕೋರ್ ಕಮಿಟಿ ಸದಸ್ಯರಾದ ಯತೀಂದ್ರಾನಂದ ಗಿರಿ, ಪ್ರಬೋಧಾನಂದ ಸರಸ್ವತಿ ಹಾಗೂ ಇತರರು ಸಮಾವೇಶದ ಭಾಗವಾಗಲಿದ್ದಾರೆ ಎಂದು ಸ್ವರೂಪ್ ಹೇಳಿದರು.
ಎಪ್ರಿಲ್ 16 ರಂದು ಹನುಮ ಜಯಂತಿ ಮೆರವಣಿಗೆಯ ಸಂದರ್ಭದಲ್ಲಿ ದಾದಾ ಜಲಾಲ್‌ಪುರ ಗ್ರಾಮದಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಪ್ರಮುಖ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾದ ಬಗ್ಗೆ ಚರ್ಚಿಸಲು ಈ ಕಾರ್ಯಕ್ರಮವನ್ನು ಯೋಜಿಸಲಾಗಿದೆ ಎಂದು ಸ್ವರೂಪ್ ಹೇಳಿದರು.