ಕಾಸರಗೋಡು: ಕೇರಳದಲ್ಲಿ ಕೆ-ರೈಲ್ ಯೋಜನೆಗಾಗಿ ಜಾಗ ವಶಪಡಿಸಲು ಗಡಿಕಲ್ಲು ಅಳವಡಿಸುವ ಕಾರ್ಯ ಜನರ ವಿರೋಧದ ನಡುವೆಯೂ ಮುಂದುವರಿಯುತ್ತಿದೆ. ಕಾಸರಗೋಡು ಜಿಲ್ಲೆಯಲ್ಲೂ ಜಾಗ ಕಳೆದುಕೊಳ್ಳುವ ಆತಂಕ ಜನರನ್ನು ಕಾಡುತ್ತಿದೆ.
ಕಾಸರಗೋಡು ರೈಲ್ವೆ ನಿಲ್ದಾಣದ ಅನತಿ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಮಾಲಿಕ್‍ದೀನಾರ್ ಮಸೀದಿ ಮತ್ತು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ಒಂದಷ್ಟು ಜಾಗ ಯೋಜನೆ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಮಸೀದಿಯ ಶವದಫನಕ್ಕಾಗಿ ಮೀಸಲಿರಿಸಿದ ಜಾಗದಲ್ಲಿ ಕೆ-ರೈಲ್ ಯೋಜನೆ ಹಳಿ ಹಾದುಹೋಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಗಡಿಕಲ್ಲು ಅಳವಡಿಸುವ ಕಾರ್ಯ ಇನ್ನಷ್ಟೆ ನಡೆಯಬೇಕಾಗಿದ್ದು, ಮಸೀದಿ ಸ್ಥಳ ರೈಲ್ವೆ ಪಾಲಾಗದಂತೆ ತಡೆಯಲು ಶತಾಯಗತಾಯ ಪ್ರಯತ್ನವೂ ನಡೆದುಬರುತ್ತಿದೆ. ಇದೇ ಸಮಸ್ಯೆ ಜಿಎಸ್‍ಬಿ ಸಮುದಾಯದ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದ ಜಾಗಕ್ಕೂ ಕಾಡುತ್ತಿದೆ. ದೇವಾಲಯ ಸಮಿತಿಯ ಜಾಗ ರೈಲ್ವೆ ಹಳಿ ಸನಿಹದ ವರೆಗೂ ಹೊಂದಿಕೊಂಡಿದ್ದು, ಗಡಿಕಲ್ಲು ಹಾಕುವ ಸಂದರ್ಭ ಜಾಗ ರೈಲ್ವೆ ಪಾಲಾಗುವ ಭೀತಿ, ಸಮುದಾಯದ ಜನರನ್ನು ಕಾಡುತ್ತಿದೆ. ಎರಡೂ ಆರಾಧನಾಲಯಗಳ ಜಾಗ ಕೆ-ರೈಲ್ ಯೋಜನೆ ಪಾಲಾಗದಂತೆ ತಡೆಯಲು ಸಮಿತಿ ಪದಾಧಿಕಾರಿಗಲು ಪ್ರಯತ್ನ ಆರಂಭಿಸಿದ್ದಾರೆ.