ನವದೆಹಲಿ: ಯುದ್ಧ ಸಂತ್ರಸ್ತ ಉಕ್ರೇನ್‌ನಿಂದ ತಮ್ಮ ವಿಧ್ಯಾಭ್ಯಾಸಗಳನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬರಬೇಕಾಗಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳು ದಿಲ್ಲಿಯ ಜಂತರ್ ಮಂತರ್ ನಲ್ಲಿ ರವಿವಾರ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ತಮ್ಮ ವಿಧ್ಯಾಭ್ಯಾಸ ಮುಂದುವರಿಸಲು ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಗ್ರಹಿಸಿದ್ದಾರೆ.
18 ರಾಜ್ಯಗಳಿಂದ ಸುಮಾರು 500 ಉಕ್ರೇನ್ MBBS ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾನಿರತ ಉಕ್ರೇನ್ MBBS ವಿದ್ಯಾರ್ಥಿಗಳ ಪೋಷಕರ ಸಂಘದ (PAUMS) ಸದಸ್ಯರನ್ನು ಸೇರುವ ನಿರೀಕ್ಷೆಯಿದೆ.
ಅನಿವಾರ್ಯ ಕಾರಣಗಳಿಂದ ತಮ್ಮ ವಿದ್ಯಾಭ್ಯಾಸವನ್ನು ಬಿಡಬೇಕಾಗಿ ಬಂದಿರುವುದರಿಂದ ತಮ್ಮ ಮಕ್ಕಳ ಭವಿಷ್ಯ ಅತಂತ್ರವಾಗಿದೆ ಎಂದು ಪೋಷಕರ ಗುಂಪು ಹೇಳಿದೆ.
ಅವರ ಜೀವಗಳನ್ನು ಉಳಿಸಿದ ರೀತಿಯಲ್ಲಿ ಮತ್ತು ಉಕ್ರೇನ್‌ನಿಂದ ಅವರನ್ನು ಮರಳಿ ಕರೆತಂದ ರೀತಿಯಲ್ಲಿ ಸರ್ಕಾರವು ನಮ್ಮ ಮಕ್ಕಳ ವೃತ್ತಿಜೀವನವನ್ನು ಉಳಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪೋಷಕರೊಬ್ಬರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು ಮಾರ್ಚ್ 4 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, ಯುದ್ಧದಂತಹ ಬಲವಾದ ಸನ್ನಿವೇಶಗಳಿಂದ ಇಂಟರ್ನ್‌ಶಿಪ್ ಬಾಕಿ ಉಳಿದಿರುವ ವಿದೇಶಿ ವೈದ್ಯಕೀಯ ಪದವೀಧರರು ತಮ್ಮ ಇಂಟರ್ನ್‌ಶಿಪ್‌ನ ಉಳಿದ ಭಾಗವನ್ನು ಭಾರತದಲ್ಲಿ ಪೂರ್ಣಗೊಳಿಸಲು ಅರ್ಹರಾಗಿದ್ದಾರೆ, ಆದರೆ ಕೋರ್ಸ್‌ಗಳ ಆರಂಭಿಕ ವರ್ಷಗಳಲ್ಲಿ ಮೊಟಕುಗೊಂಡವರಿಗೆ ಯಾವುದೇ ನಿರ್ದೇಶನಗಳನ್ನು ನೀಡಲಾಗಿಲ್ಲ.
ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ದೇಶವನ್ನು ತೊರೆಯಬೇಕಾಗಿ ಬಂದ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ.