ನವದೆಹಲಿ: ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ (JNU) ಕ್ಯಾಂಟೀನ್‌ನಲ್ಲಿ ನವರಾತ್ರಿ ಪೂಜೆಯ ವೇಳೆ ವಿದ್ಯಾರ್ಥಿಗಳ ಗುಂಪಿನ ನಡುವೆ ಸಂಘರ್ಷ ಸಂಭವಿಸಿದ್ದು, ಈ ಗಲಾಟೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಮೂಲಗಳ ಪ್ರಕಾರ ಮಾಂಸಾಹಾರ ಸೇವಿಸುವ ಮತ್ತು ಬಡಿಸುವ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, ವಿಶ್ವವಿದ್ಯಾಲಯದ ಒಳಗೆ ಎಡಪಂಥೀಯ ಮತ್ತು ಎಬಿವಿಪಿ (ಂಃಗಿP) ವಿದ್ಯಾರ್ಥಿ ಸಂಘಟನೆಗಳ ವಿದ್ಯಾರ್ಥಿ ಕಾರ್ಯಕರ್ತರ ನಡುವೆ ಈ ಘರ್ಷಣೆ ನಡೆದಿದೆ ಎನ್ನಲಾಗಿದೆ. ತಾವು ಮಾಂಸಾಹಾರ ತಿನ್ನುವುದಕ್ಕೆ ಎಬಿವಿಪಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಆರೋಪಿಸಿದ್ದು, ಈ ಆರೋಪವನ್ನು ಎಬಿವಿಪಿ ತಳ್ಳಿ ಹಾಕಿದ್ದು, ಎಡಪಂಥೀಯ ಸಂಘಟನೆಗಳು ರಾಮನವಮಿ ಪ್ರಯುಕ್ತ ಹಾಸ್ಟೆಲ್ ನಲ್ಲಿ ಪೂಜೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿವೆ. ಈ ವೇಳೆ ಘರ್ಷಣೆ ನಡೆದಿದ್ದು, ಈ ವೇಳೆ ಹಲವರಿಗೆ ಗಾಯಗಳಾಗಿವೆ. ಈ ಕುರಿತಂತೆ ಜೆಎನ್‌ಯು ಆಡಳಿತ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ವಿಶ್ವವಿದ್ಯಾನಿಲಯ ಆಡಳಿತ ಈ ಬಗ್ಗೆ ತನಿಖೆ ಆರಂಭಿಸಿದೆ.
ಎಬಿವಿಪಿ ದ್ವೇಷ ರಾಜಕಾರಣ ಮತ್ತು ವಿಭಜಿಸುವ ಅಜೆಂಡಾವನ್ನು ಪ್ರದರ್ಶಿಸುತ್ತಿದೆ ಎಂದು ಎಡಪಂಥೀಯ ವಿದ್ಯಾರ್ಥಿಗಳು ಆರೋಪಿಸಿ ಕಾವೇರಿ ಹಾಸ್ಟೆಲ್‌ನಲ್ಲಿ ಇಂದು ಹಿಂಸಾತ್ಮಕ ವಾತಾವರಣ ನಿರ್ಮಿಸಿದ್ದಾರೆ ಎನ್ನಲಾಗಿದೆ. ಊಟದ ಮೆನುವನ್ನು ಬದಲಾಯಿಸಲು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಮಾಂಸಾಹಾರವನ್ನು ಮಾಡದಂತೆ ಎಬಿವಿಪಿ ಮೆಸ್ ಸಮಿತಿಯನ್ನು ಒತ್ತಾಯಿಸಿದೆ ಎಂದು ಎಡಪಂಥೀಯ ಸಂಘಟನೆಗಳು ದೂರಿವೆ. ಆಹಾರ ಮೆನುವು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಹೊಂದಿದ್ದು ಮತ್ತು ವಿದ್ಯಾರ್ಥಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಆಯ್ಕೆ ಮಾಡಲು ಅನುಮತಿಸಲಾಗಿದೆ.
ಪರ-ವಿರೋಧ ಆರೋಪ
ಜೆಎನ್‌ಯು ಮತ್ತು ಅದರ ಹಾಸ್ಟೆಲ್‌ಗಳು ಎಲ್ಲರನ್ನು ಒಳಗೊಳ್ಳುವ ಸ್ಥಳಗಳಾಗಿವೆ ಮತ್ತು ಯಾವುದೇ ನಿರ್ದಿಷ್ಟ ವಿಭಾಗಕ್ಕೆ ಸೇರಿದ್ದು ಅಲ್ಲ. ವಿಭಿನ್ನ ದೈಹಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿದ್ಯಾರ್ಥಿಗಳು ವಿವಿಧ ಆಹಾರ ಆದ್ಯತೆಗಳನ್ನು ಹೊಂದಿದ್ದಾರೆ ಮತ್ತು ಅದನ್ನು ಗೌರವಿಸಬೇಕು ಎಂದು ಎಡಪಂಥೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ರಾಮ ನವಮಿಯ ಶುಭ ಸಂದರ್ಭದಲ್ಲಿ, ಕಾವೇರಿ ಹಾಸ್ಟೆಲ್, ಜೆಎನ್‌ಯು ನಿವಾಸಿಗಳು ಕಾರ್ಯಕ್ರಮವನ್ನು ಆಚರಿಸಲು ಪೂಜೆಯನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೆಎನ್‌ಯು ಸಾಮಾನ್ಯ ವಿದ್ಯಾರ್ಥಿಗಳು ಸೇರಬೇಕಿತ್ತು. ಹಾಸ್ಟೆಲ್‌ನಲ್ಲಿ ರಂಜಾನ್ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ ಮತ್ತು ಏಕಕಾಲದಲ್ಲಿ ಆಚರಿಸುತ್ತಿರುವುದು ಗಮನಾರ್ಹವಾಗಿದೆ. ಆದರೆ ಎಡಪಂಥೀಯರು ಸೃಷ್ಟಿಸಿದ ಗದ್ದಲದಿಂದಾಗಿ ಅದು ಸಂಜೆ 5 ಗಂಟೆಗೆ ಮಾತ್ರ ಪ್ರಾರಂಭವಾಯಿತು. ಈ ಪೂಜೆಯಲ್ಲಿ ಜೆಎನ್‌ಯುನ ಹೆಚ್ಚಿನ ಸಂಖ್ಯೆಯ ಸಾಮಾನ್ಯ ವಿದ್ಯಾರ್ಥಿಗಳು ಸೇರಿದ್ದರು. ಎಡಪಂಥೀಯರು ಆಕ್ಷೇಪಿಸಿ, ಅಡ್ಡಿಪಡಿಸಿ, ಪೂಜೆ ನಡೆಯದಂತೆ ತಡೆದರು. ‘ಆಹಾರದ ಹಕ್ಕು’ (ಮಾಂಸಾಹಾರಿ ಆಹಾರ) ವಿಷಯದಲ್ಲಿ ಅವರು ಸುಳ್ಳು ದಂಗೆಯನ್ನು ಸೃಷ್ಟಿಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ.
ಏತನ್ಮಧ್ಯೆ, ಪ್ರಸ್ತುತ ಪರಿಸ್ಥಿತಿ ಶಾಂತವಾಗಿದ್ದು, ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೈಋತ್ಯ ಡಿಸಿಪಿ ಮನೋಜ್ ಸಿ ತಿಳಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದ್ದು, ಎರಡೂ ವಿದ್ಯಾರ್ಥಿ ಪಕ್ಷಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿವೆ. ದೂರು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು,'' ಎಂದು ತಿಳಿಸಿದರು.