ನವದೆಹಲಿ: ದೇಶದ ಹಲವೆಡೆ ಕಲ್ಲಿದ್ದಲು ಕೊರತೆ ಹೆಚ್ಚಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯು ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಮೆಟ್ರೋ ಮತ್ತು ಆಸ್ಪತ್ರೆಗಳು ಸೇರಿದಂತೆ ಪ್ರಮುಖ ಕೇಂದ್ರಗಳಲ್ಲಿ ವಿದ್ಯುತ್ ಅಡಚಣೆಯಾಗುವ ಸಾಧ್ಯತೆ ಇದೆ ಎಂದು ದೆಹಲಿ ಸರ್ಕಾರ ಗುರುವಾರ ಎಚ್ಚರಿಕೆಯನ್ನು ನೀಡಿದೆ.
ದಾದ್ರಿ ಮತ್ತು ಉಂಚಹಾರ್ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ದೆಹಲಿ ಮೆಟ್ರೋ ಮತ್ತು ದೆಹಲಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಅನೇಕ ಅಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ದೆಹಲಿ ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ದೆಹಲಿ ಸರ್ಕಾರದ ಇಂಧನ ಸಚಿವ ಸತ್ಯೇಂದ್ರ ಜೈನ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಷ್ಟ್ರ ರಾಜಧಾನಿಗೆ ವಿದ್ಯುತ್ ಒದಗಿಸುವ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಸ್ತುತ ಈ ಕಲ್ಲಿದ್ದಲು ಚಾಲಿತ ಕೇಂದ್ರಗಳಿಂದ ದೆಹಲಿಯ ಶೇ. 25 ರಿಂದ 30 ರಷ್ಟು ವಿದ್ಯುತ್ ಬೇಡಿಕೆಯನ್ನು ಪೂರೈಸಲಾಗುತ್ತಿದೆ ಎಂದು ಜೈನ್ ಹೇಳಿದ್ದು, ಜನರಿಗೆ ಯಾವುದೇ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪರಿಸ್ಥಿತಿಯನ್ನು ತುಂಬಾ ಹತ್ತಿರದಿಂದ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ವಿದ್ಯುತ್ ಸ್ಥಾವರಗಳು ದೆಹಲಿಯ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಬೇಸಿಗೆ ಸಮಯದಲ್ಲೂ ದೆಹಲಿಯ ಮೆಟ್ರೋ ರೈಲು ನಿಗಮ, ಆಸ್ಪತ್ರೆಗಳು ಮತ್ತು ಮನೆಗಳಿಗೆ ನಿರಂತರ ವಿದ್ಯುತ್ ಪೂರೈಸುವಲ್ಲಿ ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂದು ಸತ್ಯೇಂದ್ರ ಜೈನ್ ಹೇಳಿದ್ದಾರೆ.
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ)ನ ದಾದ್ರಿ-II ಮತ್ತು ಝಜ್ಜರ್ (ಅರಾವಲಿ) ನಲ್ಲಿ ಕಲ್ಲಿದ್ದಲು ನಿಕ್ಷೇಪಗಳು ತುಂಬಾ ಕಡಿಮೆಯಾಗುತ್ತಿರುವುದು ದೆಹಲಿ ಸರ್ಕಾರದ ಭಯಕ್ಕೆ ಕಾರಣವಾಗಿದೆ. ಈ ಕೇಂದ್ರಗಳನ್ನು ಪ್ರಾಥಮಿಕವಾಗಿ ದೆಹಲಿಯಲ್ಲಿನ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ಸ್ಥಾಪಿಸಲಾಗಿದೆ. ದಾದ್ರಿ-II, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಮತ್ತು ಝಜ್ಜರ್ ವಿದ್ಯುತ್ ಸ್ಥಾವರಗಳಿಂದ ದೆಹಲಿಯು 1,751 ಮೆಗಾವ್ಯಾಟ್ (MW) ವಿದ್ಯುತ್ ಪಡೆಯುತ್ತದೆ. ದಾದ್ರಿ-II ಪವರ್ ಸ್ಟೇಷನ್‌ನಿಂದ ರಾಜಧಾನಿಯು ಗರಿಷ್ಠ 728 ಮೆಗಾವ್ಯಾಟ್ ಪೂರೈಕೆಯನ್ನು ಪಡೆಯುತ್ತದೆ, ಆದರೆ ಉಂಚಹಾರ್ ಕೇಂದ್ರದಿಂದ 100 ಮೆಗಾವ್ಯಾಟ್ ಪಡೆಯುತ್ತದೆ.
ಆದರೆ ಈಗ ಕಲ್ಲಿದ್ದಲು ಕೊರತೆಯಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಕತ್ತಲು ಆವರಿಸುವ ಆತಂಕವಿದೆ. ಅಲ್ಲದೆ, ಈಗಾಗಲೇ ಅನೇಕ ರಾಜ್ಯಗಳು ವಿದ್ಯುತ್ ಬೇಡಿಕೆಯನ್ನು ಪೂರೈಸಲು ಹೆಣಗಾಡುತ್ತಿವೆ. ಭಾರತದಾದ್ಯಂತ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿರುವುದಾಗಿ ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಶನ್ ಹೇಳಿದ್ದು, ಇದು ದೇಶದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಸೂಚಿಸುತ್ತದೆ.