ಇಸ್ಲಾಮಾಬಾದ್: ಇದೇ ತಿಂಗಳ ಆರಂಭದಲ್ಲಿ ಲಾಹೋರ್ ಪ್ರವಾಸದ ವೇಳೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ಉಗ್ರರ ದಾಳಿ ಬೆದರಿಕೆಯೊಡ್ಡಿದ್ದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಟ್ರೇಲಿಯಾ ಇತ್ತೀಚಿಗೆ ಪಾಕಿಸ್ತಾನದಲ್ಲಿ ಮೂರು ಟೆಸ್ಟ್, ಮೂರು ಏಕದಿನ ಪಂದ್ಯ ಹಾಗೂ ಒಂದು ಟಿ-20 ಪಂದ್ಯವನ್ನಾಡಿತ್ತು.
ಲಾಹೋರ್ ನಲ್ಲಿ ಆಸೀಸ್ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆಸಲಾಗುವುದು ಎಂದು ಆಸ್ಟ್ರೇಲಿಯನ್ ಒಳಾಡಳಿತ ಸಚಿವಾಲಯಕ್ಕೆ ಬೆದರಿಕೆ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ಗುಪ್ತಚರ ಏಜೆನ್ಸಿ ತನಿಖೆ ನಡೆಸಿತ್ತು. ಈ ಸಂಬಂಧ ಗುರುವಾರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮುಬಾಶಿರ್ ಮಕೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಾಹೋರ್ ನಿಂದ 200 ಕಿ. ಮೀ. ದೂರದಲ್ಲಿರುವ ತೊಬಾ ಟೆಕ್ ಸಿಂಗ್ ನಲ್ಲಿ ಶಂಕಿತ ಇರ್ಫಾನ್ ನಸೀರ್ ಎಂಬಾತನನ್ನು ಬಂಧಿಸಲಾಗಿದೆ. ಮೊಬೈಲ್ ಫೋನ್ ಮಾಹಿತಿ ಕಲೆಹಾಕಿ ಆತನನ್ನ ಬಂಧಿಸಿದ್ದು, ಭಯೋತ್ಪಾದನ ನಿಗ್ರಹ ಮತ್ತು ಟೆಲಿಗ್ರಾಫ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಂಧಿತ ವ್ಯಕ್ತಿ ಯಾವುದೇ ನಿಷೇಧಿತ ಸಂಘಟನೆಯೊಂದಿಗೆ ನಂಟು ಹೊಂದಿದ್ದಾನೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.