ನವದೆಹಲಿ: ಐಎಎಸ್ ಅಧಿಕಾರಿ ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ ಅವರು ಕೇವಲ 15-20 ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟೀನಾ ಮತ್ತು ಪ್ರದೀಪ್ ಅವರು ಮರಾಠಿ ಪದ್ಧತಿಯಂತೆ ವಿವಾಹವಾದರು. ಟೀನಾ ಬಿಳಿ ಮತ್ತು ಗೋಲ್ಡನ್ ಸೀರೆಯನ್ನು ಧರಿಸಿದ್ದು, ಕೂದಲಿನಲ್ಲಿ ಗಜ್ರಾವನ್ನು ಧರಿಸಿದ್ದು, ಪ್ರದೀಪ್ ಕೂಡ ಬಿಳಿ ಕುರ್ತಾ-ಪೈಜಾಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೇ ಕೆಲವು ಸಂಬಂಧಿಕರ ಉಪಸ್ಥಿತಿಯೊಂದಿಗೆ ದಂಪತಿಗಳು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು.
2015ರ ಐಎಎಸ್ ಬ್ಯಾಚ್ ನ ಟಾಪರ್ ಟೀನಾ ದಾಬಿ ಮತ್ತು ಡಾ ಪ್ರದೀಪ್ ಗವಾಂಡೆ(2013ನೇ ಬ್ಯಾಚ್) ಮೇ 2021 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಟೀನಾ ಮತ್ತು ಪ್ರದೀಪ್ ಒಟ್ಟಿಗೆ ಕೆಲಸ ಮಾಡುವಾಗ ಒಳ್ಳೆಯ ಸ್ನೇಹಿತರಾದರು. ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಸುಮಾರು 1 ವರ್ಷದ ಡೇಟಿಂಗ್ ನಂತರ ಟೀನಾ ಮತ್ತು ಪ್ರದೀಪ್ ಮದುವೆಯಾಗಲು ನಿರ್ಧರಿಸಿದರು.
ಟೀನಾ ದಾಬಿ ಅವರಿಗೆ ಇದು ಎರಡನೇ ಮದುವೆಯಾಗಿದೆ. 2015ರಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ದಾಬಿ ಅವರು 2015ರ ಐಎಎಸ್ ಪರೀಕ್ಷೆಗಳಲ್ಲಿ ಎರಡನೇ ಸ್ಥಾನ ಪಡೆದ ಅಥರ್ ಅಮೀರ್ ಉಲ್ ಶಫಿ ಖಾನ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದ್ದರು. ಆದರೆ 2021ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು.