ಕೋಝಿಕ್ಕೋಡ್: 10ನೇ ತರಗತಿ ವಿದ್ಯಾರ್ಥಿಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಜಯದಾಸನ್ ಅವರ ಪುತ್ರಿ ಅನುಶ್ರೀ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಪಯ್ಯೋಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಮನೆಗೆ ಬರುವಷ್ಟರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಅನುಶ್ರೀ ಪೋಷಕರು ತಿಳಿಸಿದ್ದಾರೆ. ಫಿಸಿಕ್ಸ್ ಪರೀಕ್ಷೆ ಕಷ್ಟವಾಗಿದೆ ಎಂದು ತಿಳಿಸಿದ ಅನುಶ್ರೀ ಬಟ್ಟೆ ಬದಲಿಸಲು ಕೊಠಡಿಗೆ ತೆರಳಿದ್ದರು. ಆದರೆ ನಂತರ ಅನುಶ್ರೀಯ ಧ್ವನಿ ಕೇಳಿಸದೆ ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಳು.
ಕೂಡಲೇ ಆಕೆಯನ್ನು ಪಯ್ಯೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಳಾದಳು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಸಂಬಂಧಿಕರು ಹೇಳುವಂತೆ ನಿನ್ನೆ ನಡೆದಿದ್ದ ಗಣಿತ ಪರೀಕ್ಷೆಯೂ ಕಷ್ಟವಾಗಿತ್ತು ಎಂದು ಅನುಶ್ರೀ ಹೇಳಿದ್ದಳು ಎನ್ನಲಾಗಿದೆ.