ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಯಲ್ಲಿ ಬಯಸಿದವರಿಗೆ ಮಾತ್ರವೇ ಇನ್ಮುಂದೆ ವಿದ್ಯುತ್ ಸಬ್ಸಿಡಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಘೋಷಿಸಿದ್ದಾರೆ.
ಉಚಿತ ಹಾಗೂ ವಿದ್ಯುತ್ ಸಬ್ಸಿಡಿ ಘೋಷಣೆ ದೆಹಲಿ ಸರ್ಕಾರದ ದೊಡ್ಡ ಜನಪ್ರಿಯ ಯೋಜನೆಯಾಗಿದೆ. ಆದರೆ ಈ ಬಗ್ಗೆ ರಾಜಕೀಯ ವಿರೋಧಿಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಐಚ್ಛಿಕಗೊಳಿಸಲಾಗುವುದು. ಉಚಿತ ಅಥವಾ ಸಬ್ಸಿಡಿ ವಿದ್ಯುತ್ ಅನ್ನು ಕೇಳುವವರಿಗೆ ಮಾತ್ರ ನೀಡಲಾಗುವುದು. ಅಕ್ಟೋಬರ್ 1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಯಾರಾದರೂ ತನ್ನನ್ನು ತಾನು ಸಮರ್ಥನೆಂದು ಪರಿಗಣಿಸಿದರೆ, ತನಗೆ ವಿದ್ಯುತ್ ಸಬ್ಸಿಡಿ ಬೇಡ ಮತ್ತು ಸಾಮಾನ್ಯ ದರದ ವಿದ್ಯುತ್ ಬಳಸಬಹುದೆಂದು ದೆಹಲಿ ಸರ್ಕಾರಕ್ಕೆ ಹೇಳಬಹುದು. ಈ ಬಗ್ಗೆ ಜನರನ್ನು ಕೇಳುವ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದಿದ್ದಾರೆ.
ಪ್ರಸ್ತುತ ದೆಹಲಿ ಸರ್ಕಾರ ಗ್ರಾಹಕರಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ತಿಂಗಳಿಗೆ 201 ರಿಂದ 400 ಯೂನಿಟ್ ವಿದ್ಯುತ್ ಬಳಸುವವರಿಗೆ 800 ರೂ. ಸಬ್ಸಿಡಿ ನೀಡಲಾಗುತ್ತಿದೆ.
ಕೇಜ್ರಿವಾಲ್ ಅವರ ಉಚಿತ ವಿದ್ಯುತ್ ಮತ್ತು ನೀರಿನ ಯೋಜನೆಯು ದೆಹಲಿಯಲ್ಲಿ ಅವರ ಬೃಹತ್ ಗೆಲುವಿಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ.
ಕಳೆದ ಕೆಲ ವಾರಗಳಿಂದ ಕಲ್ಲಿದ್ದಲು ಕೊರತೆಯುಂಟಾಗಿ ವಿದ್ಯುತ್ ಬಿಕ್ಕಟ್ಟು ಎದುರಾಗಿದ್ದು, ಕೇಜ್ರಿವಾಲ್ ಸರ್ಕಾರದ ಉಚಿತ ವಿದ್ಯುತ್ ಯೋಜನೆ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸಿಎಂ ಅಕ್ಟೋಬರ್ 1 ರಿಂದ ಉಚಿತ ವಿದ್ಯುತ್ ಮತ್ತು ವಿದ್ಯುತ್ ಸಬ್ಬಿಡಿ ಪಡೆಯುವುದನ್ನ ಜನರ ನಿರ್ಧಾರಕ್ಕೆ ಬಿಡಲಿದ್ದಾರೆ.