ಭರೂಚ್: ಸರ್ಕಾರದ ಯೋಜನೆಗಳ ಶೇ. 100 ರಷ್ಟು ಪ್ರಗತಿ ಸಾಧಿಸುವುದರೊಂದಿಗೆ ಒಲೈಕೆ ರಾಜಕಾರಣ ಕೊನೆಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಇಂದು ಗುಜರಾತ್‌ನ ಭರೂಚ್ ನಗರದಲ್ಲಿ 'ಉತ್ಕರ್ಷ್ ಸಮರೋಹ್' ನಲ್ಲಿ ವರ್ಚುವಲ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, "ಸರ್ಕಾರದ ಯೋಜನೆಗಳು ಶೇಕಡಾ ನೂರರಷ್ಟು ಫಲಾನುಭವಿಗಳಿಗೆ ತಲುಪಿದರೆ ತಾರತಮ್ಯವನ್ನು ಕೊನೆಗೊಳಿಸುತ್ತದೆ ಮತ್ತು ಪ್ರಯೋಜನ ಪಡೆಯಲು ಶಿಫಾರಸಿನ ಅಗತ್ಯವೂ ಇರುವುದಿಲ್ಲ. ಇದರಿಂದ ಒಲೈಕೆ ರಾಜಕೀಯ ಸಹ ಕೊನೆಗೊಳ್ಳುತ್ತದೆ" ಎಂದಿದ್ದಾರೆ.
"ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ, ಅವು ಕಾಗದದಲ್ಲಿ ಉಳಿಯುತ್ತವೆ ಅಥವಾ ಅಂತಹ ಯೋಜನೆಗಳಿಗೆ ಅರ್ಹರಲ್ಲದವರು ಪ್ರಯೋಜನ ಪಡೆಯುತ್ತಾರೆ" ಎಂದು ಅವರು ಮೋದಿ ಹೇಳಿದರು.
ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಜಿಲ್ಲೆಗೆ ಸಹಾಯ ಮಾಡುವ ನಾಲ್ಕು ಪ್ರಮುಖ ರಾಜ್ಯ ಸರ್ಕಾರಿ ಯೋಜನೆಯಲ್ಲಿ ಭರೂಚ್ ಶೇ. 100 ರಷ್ಟು ಪ್ರಗತಿ ಸಾಧಿಸಿದ ಜಿಲ್ಲೆಯಾಗಿದೆ.
ಈ ವರ್ಷದ ಜನವರಿ 1 ರಿಂದ ಮಾರ್ಚ್ 31 ರವರೆಗೆ ಜಿಲ್ಲಾಡಳಿತವು ನಡೆಸಿದ "ಉತ್ಕರ್ಷ್ ಇನಿಶಿಯೇಟಿವ್", ವಿಧವೆಯರು, ವೃದ್ಧರು ಮತ್ತು ನಿರ್ಗತಿಕ ನಾಗರಿಕರಿಗೆ ನೆರವು ನೀಡುವ ಯೋಜನೆಗಳ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ನಾಲ್ಕು ಯೋಜನೆಗಳಲ್ಲಿ ಒಟ್ಟು 12,854 ಫಲಾನುಭವಿಗಳನ್ನು ಗುರುತಿಸಲಾಗಿದೆ.