ಕೀವ್: ರಷ್ಯಾ 1,000ಕ್ಕೂ ಹೆಚ್ಚು ಶಾಲೆಗಳ ಮೇಲೆ ಶೆಲ್ ದಾಳಿ ನಡೆಸಿದ್ದು, 95 ಶಾಲೆಗಳನ್ನು ನಾಶಪಡಿಸಿದೆ ಎಂದು ಉಕ್ರೇನಿಯನ್ ಸರ್ಕಾರ ಹೇಳಿದೆ.
ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ವಿಶ್ವದ ವಿವಿಧ ರಾಷ್ಟ್ರಗಳ ಪ್ರಾಸಿಕ್ಯೂಟರ್ ಗಳು ಮತ್ತು ಉಕ್ರೇನ್ ಪ್ರಾಸಿಕ್ಯೂಟರ್ ಜನರಲ್ ಗಳು ಉಕ್ರೇನ್ ನಲ್ಲಿನ ಸಂಭಾವ್ಯ ಯುದ್ಧಾಪರಾಧಗಳ 8,000ಕ್ಕೂ ಹೆಚ್ಚು ವರದಿಗಳ ತನಿಖೆ ನಡೆಸುತ್ತಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಆಸ್ಪತ್ರೆಗಳು, ವಸತಿ ಕಟ್ಟಡಗಳಂತಹ ನಾಗರಿಕ ನಿರ್ಮಾಣಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುವ ಗುರಿ ಹೊಂದಲಾಗಿದೆ ಎಂದು ಅನೇಕ ಮಂದಿ ಆರೋಪಿಸಿದ್ದಾರೆ.
ಪಶ್ಚಿಮ ಉಕ್ರೇನಿಯನ್ ನಗರವಾದ ಎಲ್ವಿವ್ ಹಲವಾರು ಭಾರಿ ಸ್ಫೋಟಗಳಿಂದ ತತ್ತರಿಸಿದೆ. ತೀವ್ರವಾಗಿ ಗಾಯಗೊಂಡವರು ಸೇರಿದಂತೆ 260ಕ್ಕೂ ಹೆಚ್ಚು ಉಕ್ರೇನಿಯನ್ ಯೋಧರನ್ನು ಸೋಮವಾರ ಪಾಳುಬಿದ್ದ ನಗರವಾದ ಮಾರಿಯುಪೋಲ್ ನಲ್ಲಿರುವ ಸ್ಟೀಲ್ ಪ್ಲಾಂಟ್‌ನಿಂದ ಸ್ಥಳಾಂತರಿಸಲಾಯಿತು ಮತ್ತು ರಷ್ಯಾದ ನಿಯಂತ್ರಣದಲ್ಲಿರುವ ಪ್ರದೇಶಗಳಿಗೆ ಕರೆದೊಯ್ಯಲಾಯಿತು ಎಂದು ಉಕ್ರೇನಿಯನ್ ಮಿಲಿಟರಿ ತಿಳಿಸಿದೆ.