ಜಲಂಧರ್: ಪಾಕಿಸ್ತಾನದ ಡ್ರೋನ್ ಭಾರತೀಯ ಸೇನೆಯ ಯೋಧರು ಹೊಡೆದುರುಳಿಸಿದ್ದು, ಈ ವೇಳೆ ಸುಮಾರು 10 ಕೆಜಿಗೂ ಹೆಚ್ಚಿನ ಪ್ರಮಾಣದ ಅಕ್ರಮ ಹೆರಾಯಿನ್ ಅನ್ನು ವಶಕ್ಕೆ ಪಡೆದಿದ್ದಾರೆ.
ಭಾನುವಾರ ತಡರಾತ್ರಿ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದ ಕಡೆಯಿಂದ ಭಾರತದ ಕಡೆ ಪ್ರವೇಶಿಸುತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದೆ. ಸೋಮವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪಾಕಿಸ್ತಾನದಿಂದ ಡ್ರೋನ್ ಭಾರತದ ಗಡಿಯನ್ನು ಪ್ರವೇಶಿಸುತ್ತಿರುವುದನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುರುತಿಸಿದರು ಎಂದು ಬಿಎಸ್‌ಎಫ್ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಚ್ಚೆತ್ತ ಯೋಧರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಡ್ರೋನ್ ಅನ್ನು ಹೊಡೆದುರುಳಿಸಿದರು ಎಂದು ಅವರು ಹೇಳಿದ್ದಾರೆ. ಡ್ರೋನ್‌ನೊಂದಿಗೆ ಕಟ್ಟಲಾಗಿದ್ದ ಬ್ಯಾಗ್‌ನಿಂದ 10 ಕೆಜಿ 670 ಗ್ರಾಂ ತೂಕದ ಒಂಬತ್ತು ಹೆರಾಯಿನ್ ಪ್ಯಾಕೆಟ್‌ಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ.
ಶನಿವಾರ ಮುಂಜಾನೆ, ಜಮ್ಮು ಪ್ರದೇಶದ ಆರ್‌ಎಸ್ ಪುರ ಉಪವಿಭಾಗದ ಅರ್ನಿಯಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‌ನತ್ತ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಡೆಗಳು ಗುಂಡು ಹಾರಿಸಿದ್ದವು. ಬಳಿಕ ಆ ಡ್ರೋನ್ ತಕ್ಷಣವೇ ಹಿಂತಿರುಗಿತ್ತು. ಕಳೆದ ತಿಂಗಳು ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದುರುಳಿಸಿತ್ತು.