ಕೊಚ್ಚಿ: ಕಾಶ್ಮೀರ ಉಗ್ರರ ನೇಮಕಾತಿ ಪ್ರಕರಣದಲ್ಲಿ 10 ಮಂದಿಯ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ತಡಿಯಂಡವಿಡ ನಜೀರ್ ಸೇರಿದಂತೆ 10 ಮಂದಿಯ ಶಿಕ್ಷೆಯನ್ನು ಹೈಕೋರ್ಟ್ ಇಂದು ನಡೆಸಿದ ವಿಚಾರಣೆಯಲ್ಲಿ ಎತ್ತಿ ಹಿಡಿದಿದೆ. ಎರಡನೇ ಆರೋಪಿ ಸೇರಿದಂತೆ ಮೂವರನ್ನು ಬಿಡುಗಡೆ ಮಾಡಲಾಗಿದೆ. ಎಂಎಚ್ ಫೈಸಲ್, ಉಮರ್ ಫಾರೂಕ್ ಮತ್ತು ಮೊಹಮ್ಮದ್ ನವಾಜ್ ಎಂಬವರ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಇನ್ನು ಕೆಲವರಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ತಡಿಯಂಡವಿಡ ನಜೀರ್, ಸರ್ಫರಾಜ್ ನವಾಜ್ ಮತ್ತು ಸಬೀರ್ ಎಂಬವರು ಎನ್‌ಐಎ ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿದ್ದರು. ಬುಹಾರಿ ಮತ್ತು ಇತರ 13 ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು.ನ್ಯಾಯಾಲಯವು ಎನ್‌ಐಎ ಯ ಮನವಿಯನ್ನು ಪುರಸ್ಕರಿಸಿದೆ. ಕೆಲವು ಅಪರಾಧಗಳ ಖುಲಾಸೆಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಸಿ ಜಯಚಂದ್ರನ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಏನು ಪ್ರಕರಣ:
2008ರಲ್ಲಿ ತಡಿಯಂಡವಿಡ ನಜೀರ್ ಮತ್ತು ಇತರರ ನೇತೃತ್ವದಲ್ಲಿ ದೇಶದ ವಿರುದ್ಧ ಹೋರಾಡಲು ಕೇರಳದ ಯುವಕರನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಸೇರಿಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿದೆ. 24 ಆರೋಪಿಗಳ ಪ್ರಕರಣದಲ್ಲಿ, ಗಡಿಯಲ್ಲಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ನಾಲ್ವರು ಕೊಲ್ಲಲ್ಪಟ್ಟರು. ಇಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಈ ಹಿಂದೆ 18 ಆರೋಪಿಗಳ ಪೈಕಿ ಐವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.
2013ರಲ್ಲಿ ಕೊಚ್ಚಿಯಲ್ಲಿ ನಡೆದ ಎನ್ ಐಎ ವಿಚಾರಣೆಯಲ್ಲಿ ಪ್ರಮುಖ ಆರೋಪಿ ಅಬ್ದುಲ್ ಜಬ್ಬಾರ್ ಗೆ ನಾಲ್ಕು ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಬುಹಾರಿ ಮತ್ತು ಸರ್ಫ್ರಾಜ್ ನವಾಜ್ ಅವರಿಗೆ ಮೂರು ಜೀವಾವಧಿ ಶಿಕ್ಷೆ ಮತ್ತು 1.5 ಲಕ್ಷ ರೂ.ದಂಡ ವಿಧಿಸಲಾಗಿದೆ. ನಜೀರ್ ಸೇರಿದಂತೆ ಉಳಿದ 10 ಆರೋಪಿಗಳಿಗೆ ಎರಡು ಜೀವಾವಧಿ ಶಿಕ್ಷೆ ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಶಿಕ್ಷೆಯನ್ನು ಪ್ರಶ್ನಿಸಿ 13 ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.