ಭೋಪಾಲ್: ಪ್ರಸ್ತುತ ಕಾಲದಲ್ಲಿ ಹಣಕ್ಕಾಗಿ ಜನರು ಯಾವ ಮಟ್ಟಕ್ಕಾದರೂ ಇಳಿಯಲು ತಯಾರಾಗಿರುತ್ತಾರೆ. ಆದರೆ, ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಆಭರಣ ವ್ಯಾಪಾರಿಯೊಬ್ಬರು 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಇಡೀ ಕುಟುಂಬದ ಜತೆಗೆ ಲೌಕಿಕ ಜೀವನ ತೊರೆದು, ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ.
ಆಭರಣ ವ್ಯಾಪಾರಿ ರಾಕೇಶ್ ಸುರಾನ 11 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಗೋಶಾಲೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡಿದ್ದಾರೆ. ತಾನೊಬ್ಬನೆ ಅಲ್ಲದೆ, ತನ್ನೊಂದಿಗೆ ಪತ್ನಿ ಲೀನಾ (36) ಮತ್ತು ಪುತ್ರ ಅಮಯ್ (11) ಜತೆ ಲೌಕಿಕ ಜೀವನ ತೊರೆದು ಆಧ್ಯಾತ್ಮಿಕತೆ ದಾರಿಯನ್ನು ಹಿಡಿದಿದ್ದಾರೆ. ಜೈಪುರದಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಇಡೀ ಕುಟುಂಬದ ಜತೆಗೆ ರಾಕೇಶ್ ದೀಕ್ಷೆಯನ್ನು ಪಡೆದುಕೊಳ್ಳಲಿದ್ದಾರೆ. ಜೈನ ಸಮಾಜದವರು ಕೂಡ ರಾಕೇಶ್ ಕುಟುಂಬವನ್ನು ಅದ್ಧೂರಿಯಾಗಿ ಬೀಳ್ಕೊಟ್ಟರು.
ರಾಕೇಶ್ ಕುಟುಂಬದ ನಡೆಯನ್ನು ಜೈನ ಸಮಾಜ ಸ್ವಾಗತಿಸಿದೆ ಮತ್ತು ಗೌರವಿಸಿದೆ. ಸಕಾಲ್ ಜೈನ ಸಮಾಜ ಮಂಗಳವಾರ ಸಮಾರಂಭವನ್ನು ಏರ್ಪಡಿಸಿತ್ತು. ಈ ವೇಳೆ ಸಾಕಷ್ಟು ಜನರು ಸೇರಿದ್ದರು. ಎಲ್ಲರು ಸೇರಿ ದೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿರುವ ರಾಕೇಶ್ ಕುಟುಂಬಕ್ಕೆ ಗೌರವದಿಂದ ಬೀಳ್ಕೊಟ್ಟರು.
ಮಗ ದೊಡ್ಡವನಾಗಲು ಕಾದಿದ್ದರು
ಮಹೇಂದ್ರ ಸಾಗರ್ ಮಹಾರಾಜ್ ಮತ್ತು ಮನೀಷ್ ಸಾಗರ್ ಮಹಾರಾಜ್ ಅವರ ಪ್ರವಚನಗಳಿಂದ ಪಡೆದ ಸ್ಫೂರ್ತಿಯಿಂದ ನನ್ನ ಮನಸ್ಸು ಬದಲಾಗಿದೆ ಮತ್ತು ಆ ಕಾರಣದಿಂದಾಗಿ ಧರ್ಮ, ಆಧ್ಯಾತ್ಮಿಕತೆ ಮತ್ತು ಸ್ವಯಂ ಸ್ವರೂಪವನ್ನು ಗುರುತಿಸುವ ಸ್ಫೂರ್ತಿ ನನಗೆ ಸಿಕ್ಕಿತು ಎಂದು ಸುದ್ದಿಗಾರರೊಂದಿಗಿನ ಚರ್ಚೆಯಲ್ಲಿ ರಾಕೇಶ್ ಹೇಳಿದರು. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿರುವ ರಾಕೇಶ್ ಪತ್ನಿ ಲೀನಾ ಅವರಿಗೆ ಬಾಲ್ಯದಿಂದಲೂ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕೆಂಬ ಆಸೆ ಇತ್ತು. ಅಷ್ಟೇ ಅಲ್ಲ, ಮಗ ಅಮಯ್ 4 ವರ್ಷದವನಿದ್ದಾಗ ಆಧ್ಯಾತ್ಮಿಕ ಹಾದಿಯಲ್ಲಿ ಸಾಗುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಮಗ ತುಂಬಾ ಚಿಕ್ಕವನಾಗಿದ್ದಾರಿಂದ ತಮ್ಮ ಇಚ್ಛೆಯ ಹಾದಿಯನ್ನು ಅನುಸರಿಸಲು ಏಳು ವರ್ಷಗಳ ಕಾಲ ಕಾಯಬೇಕಾಯಿತು.
ಸಣ್ಣ ಆಭರಣ ಅಂಗಡಿಯಿಂದ ಬಿಸಿನೆಸ್ ಆರಂಭ
ರಾಕೇಶ್ ಅವರು ಬಾಲಘಾಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಅಂಗಡಿಯನ್ನು ಹೊಂದಿದ್ದರು, ಆದರೆ ಕ್ರಮೇಣ ಅವರ ವ್ಯಾಪಾರವು ಬೆಳೆದು ಕೋಟಿಗಟ್ಟಲೆ ಆಸ್ತಿಯನ್ನು ಸಂಪಾದಿಸಿದರು. ಹೆಸರು, ಕೀರ್ತಿ ಎರಡನ್ನೂ ಹೊಂದಿದ್ದರು ಎಲ್ಲ ಆಸ್ತಿಯನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ. ಆಧುನಿಕತೆಯ ಯುಗದಲ್ಲಿ ಸುಖೀ ಜೀವನ ನಡೆಸಲು ಬೇಕಾದ ಎಲ್ಲಾ ಸೌಲಭ್ಯಗಳೂ ರಾಕೇಶ್ ಅವರ ಕುಟುಂಬದಲ್ಲಿ ಇದ್ದವು. ಅವರು ಕೋಟಿಗಟ್ಟಲೆ ಆಸ್ತಿ ಗಳಿಸಿದ್ದಾರೆ. ಆದರೆ, ಇಡೀ ಕುಟುಂಬ ತಮ್ಮ ವರ್ಷಗಳ ಸಂಪಾದನೆಯನ್ನು ದಾನ ಮಾಡುವ ಮೂಲಕ ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಿದೆ. ಈಗಾಗಲೇ ದೀಕ್ಷೆ ಪಡೆದಿರುವ ತಾಯಿ ಮತ್ತು ಸಹೋದರಿ
ಸ್ಥಳೀಯರು ನೀಡಿರುವ ಮಾಹಿತಿ ಪ್ರಕಾರ, ರಾಕೇಶ್ ಅವರ ತಾಯಿ ಈಗಾಗಲೇ ಗೃಹಸ್ಥ ಜೀವನದಿಂದ ವಿಮುಖಗೊಂಡು ದೀಕ್ಷೆಯನ್ನು ಪಡೆದಿದ್ದಾರೆ. ಅವರ ಸಹೋದರಿಯೊಬ್ಬರು ಸಹ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ಇದೀಗ ರಾಕೇಶ್ ಅವರು ತಾಯಿ ಮತ್ತು ಸಹೋದರಿಯ ಮಾರ್ಗವನ್ನು ಅನುಸರಿಸಿ ದೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ.