ಜಿನೀವಾ: ಜಗತ್ತು ಕರೊನಾ ಸಾಂಕ್ರಾಮಿಕತೆಯಿಂದ ಸುಧಾರಿಸಿಕೊಳ್ಳುತ್ತಿರುವ ಸಮಯದಲ್ಲಿ ಮಂಕಿಪಾಕ್ಸ್ ವ್ಯಾಧಿ ತಲೆಯೆತ್ತಿರುವುದು ತಲೆನೋವಿಗೆ ಕಾರಣವಾಗಿದೆ. 12 ದೇಶಗಳಲ್ಲಿ ಮಂಕಿಪಾಕ್ಸ್ನ 92 ಪ್ರಕರಣಗಳು ದೃಢಪಟ್ಟಿದ್ದು, 28 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶನಿವಾರ ಹೇಳಿದೆ.
ಎಂಡೆಮಿಕ್ ದೇಶಗಳು: ಬೆನಿನ್, ಕ್ಯಾಮರೂನ್, ಡೆಮಾಕ್ರಟಿಕ್ ರಿಬ್ಲಿಕ್ ಆಫ್ ಕಾಂಗೊ, ಗಬಾನ್, ಘಾನಾ, ಐವರಿ ಕೋಸ್ಟ್, ಲೈಬೀರಿಯಾ, ನೈಜೀರಿಯಾ, ರಿಪಬ್ಲಿಕ್ ಆಫ್ ಕಾಂಗೊ, ಸಿಯೆರಾ ಲಿಯೋನ್ ಮತ್ತು ದಕ್ಷಿಣ ಸುಡಾನ್.
ಮಂಕಿಪಾಕ್ಸ್ ಸೋಂಕಿತರ ನಿಕಟ ಭೌತಿಕ ಸಂಪರ್ಕ ಇರುವವರು ಈ ರೋಗಕ್ಕೆ ತುತ್ತಾಗುವ ಅಪಾಯ ಅಧಿಕ ಎನ್ನುವುದು ಇದುವರೆಗಿನ ಪುರಾವೆಗಳಿಂದ ಗೊತ್ತಾಗಿದೆ ಎಂದು ಡಬ್ಲ್ಯುಎಚ್ಒ ವಿವರಿಸಿದೆ.
ಉಸಿರಾಟದ ಕಣಗಳು, ದೇಹದ ದ್ರವಗಳು ಮತ್ತು ಹಾಸಿಗೆಯಂಥ ಮಲಿನಗೊಂಡ ವಸ್ತುಗಳ ನಿಕಟ ಸಂಪರ್ಕದಿಂದ ಮಂಕಿಪಾಕ್ಸ್ ವೈರಾಣು ಹರಡುತ್ತದೆ. ವೈರಸ್ ಸಾಮಾನ್ಯವಾಗಿ 6ರಿಂದ 13 ದಿನ ಜೀವಂತ ಇರುತ್ತದೆ. ಗರಿಷ್ಠ 5ರಿಂದ 21 ದಿನದ ವರೆಗೂ ಇರಬಲ್ಲದು.
ಕೇರಳ, ಮಹಾರಾಷ್ಟ್ರದಲ್ಲಿ ಎಚ್ಚರ: ಯುರೋಪ್ ಸಹಿತ ಹಲವು ದೇಶಗಳಲ್ಲಿ ಹಾವಳಿ ನಡೆಸುತ್ತಿರುವ ಮಂಕಿಪಾಕ್ಸ್ ಭಾರತಕ್ಕೂ ಹರಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ವಿಶೇಷವಾಗಿ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ರೋಗದ ಬಗ್ಗೆ ಎಚ್ಚರವಿದ್ದು ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿರ್ದೇಶಿಸಿದ್ದಾರೆ. ಮಹಾರಾಷ್ಟ್ರದ ಆರೋಗ್ಯ ಇಲಾಖೆ ಕೂಡ ಸೂಕ್ತ ಎಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿರುವ 12 ದೇಶಗಳಿಂದ ಬರುವವರ ಸ್ಯಾಂಪಲ್ಗಳನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್ಐವಿ) ಕಳಿಸಲಾಗುತ್ತದೆ.
ಯಾವ್ಯಾವ ದೇಶಗಳಲ್ಲಿ ಪತ್ತೆ?: ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಜರ್ಮನಿ, ಫ್ರಾನ್ಸ್, ಇಟಲಿ, ನೆದರ್ಲೆಂಡ್ಸ್, ಪೋರ್ಚುಗಲ್, ಸ್ಪೇನ್, ಸ್ವೀಡನ್, ಬ್ರಿಟನ್ ಮತ್ತು ಅಮೆರಿಕ.
ಪ್ರಾಣಿಗಳಿಂದ ಮಾನವರಿಗೆ: ಮಂಕಿಪಾಕ್ಸ್ ಪ್ರಾಣಿಗಳಿಂದ ಮಾನವರಿಗೆ ಹರಡುವ ವೈರಸ್ ಆಗಿದೆ. ಹಿಂದೆ ಸಿಡುಬು (ಸ್ಮಾಲ್ಪಾಕ್ಸ್) ರೋಗಿಗಳಲ್ಲಿ ಕಂಡಂಥ ಲಕ್ಷಣವೇ ಇದರಲ್ಲೂ ಕಾಣಿಸುತ್ತದೆ. ಎಂಡೆಮಿಕ್ ಅಲ್ಲದ ದೇಶದಲ್ಲಿ ಮಂಕಿಪಾಕ್ಸ್ನ ಒಂದೇ ಒಂದು ಪ್ರಕರಣ ಪತ್ತೆಯಾದರೂ ಅದು ಸೋಂಕಿನ ಆಸ್ಪೋಟ ಎಂದೇ ಪರಿಗಣಿಸಲಾಗುತ್ತದೆ.
ಕರೊನಾ ಸಂಕಟದಿಂದ ಜಗತ್ತು ಚೇತರಿಸಿ ಕೊಳ್ಳುತ್ತಿರುವ ವೇಳೆಯಲ್ಲೇ ಮಂಕಿಪಾಕ್ಸ್ ಸೋಂಕು ಹಲವು ದೇಶಗಳಲ್ಲಿ ಪತ್ತೆಯಾಗಿರುವುದು ಕಳವಳಕಾರಿ ವಿಷಯವಾಗಿದೆ.
| ಜೋ ಬೈಡೆನ್ ಅಮೆರಿಕ ಅಧ್ಯಕ್ಷ
ಇಸ್ರೇಲ್ನಲ್ಲಿ ಒಂದು ಪ್ರಕರಣ: ಇಸ್ರೇಲ್ನಲ್ಲಿ ಮಂಕಿಪಾಕ್ಸ್ನ ಒಂದು ಪ್ರಕರಣ ದೃಢಪಟ್ಟಿದ್ದು, ಸೋಂಕು ಪೀಡಿತ ಜತೆಗೆ ಸಂಪರ್ಕದಲ್ಲಿದವರಿಗೆ ಜ್ವರಕಾಣಿಸಿಕೊಂಡಿದೆ. ವೈರಸ್ನ ಶಂಕೆ ವ್ಯಕ್ತವಾಗಿದೆ. ರೋಗಿಯು ಟೇಲ್ ಅವಿವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಉತ್ತಮವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಕರೊನಾ ಹೊಸ ಕೇಸ್ ತುಸು ಇಳಿಕೆ: ಭಾರತದಲ್ಲಿ ಭಾನುವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ 2,226 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಶನಿವಾರಕ್ಕಿಂತ ಶೇ. 4.2ರಷ್ಟು ಕಡಿಮೆ ಆಗಿದೆ. ಒಟ್ಟು ಸೋಂಕಿನ ಸಂಖ್ಯೆ 4,31,36,371ಕ್ಕೆ ಏರಿದೆ. 24 ತಾಸಿನಲ್ಲಿ 65 ಮಂದಿ ಮೃತಪಟ್ಟಿದ್ದು, ಒಟ್ಟಾರೆ 5,24,413 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 14,955 ಇದೆ. ಕೇರಳ (558), ದೆಹಲಿ (479), ಮಹಾರಾಷ್ಟ್ರ (307), ಹರಿಯಾಣ (235), ಕರ್ನಾಟಕ (155) ಹೊಸ ಕೇಸ್ಗಳು ವ್ಯಕ್ತವಾಗಿವೆ.