ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಭಾರತೀಯ ಆರ್ಥಿಕತೆಗೆ ಇನ್ನೂ 12 ವರ್ಷಗಳು ಅಗತ್ಯವಾಗಿವೆ ಎಂದು
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ಬಿಡುಗಡೆಗೊಂಡ ತನ್ನ ವರದಿಯಲ್ಲಿ ತಿಳಿಸಿದೆ.ಸಾಂಕ್ರಾಮಿಕದಿಂದಾಗಿ ಭಾರತದ ಆರ್ಥಿಕತೆಯು ಸುಮಾರು 52 ಲ.ಕೋ.ರೂ.ಗಳ ಉತ್ಪಾದನಾ ನಷ್ಟವನ್ನು ಅನುಭವಿಸಿದೆ ಎಂದು ಆರ್‌ಬಿಐ ತನ್ನ 'ಕರೆನ್ಸಿ ಮತ್ತು ಹಣಕಾಸು ವರದಿ 2021-22'ರಲ್ಲಿ ಅಂದಾಜಿಸಿದೆ.
2020-21ಕ್ಕೆ (ಮೈನಸ್) ಶೇ.6.6 ಮತ್ತು 2021-22ಕ್ಕೆ ಶೇ.8.9ರ ನೈಜ ಪ್ರಗತಿ ದರಗಳನ್ನು ಪರಿಗಣಿಸಿದರೆ ಮತ್ತು 2022-23ಕ್ಕೆ ಶೇ.7.2 ಮತ್ತು ಅದರಾಚೆಗೆ ಶೇ.7.5ರ ಪ್ರಗತಿ ದರವನ್ನು ಮುನ್ನಂದಾಜಿಸಿದರೆ ಭಾರತವು 2034-35ರ ವೇಳೆಗೆ ಕೋವಿಡ್ ನಷ್ಟದಿಂದ ಹೊರಗೆ ಬರುವ ನಿರೀಕ್ಷೆಯಿದೆ ಎಂದು ಆರ್‌ಬಿಐ ತನ್ನ ವರದಿಯಲ್ಲಿ ತಿಳಿಸಿದೆ. ಕೋವಿಡ್‌ನ ಬಹುಅಲೆಗಳು ಆರ್ಥಿಕತೆಯ ಸುಸ್ಥಿರ ಚೇತರಿಕೆಯ ಹಾದಿಯಲ್ಲಿ ತೊಡಕುಗಳನ್ನುಂಟು ಮಾಡಿದ್ದು,ಜಿಡಿಪಿ ಬೆಳವಣಿಗೆಯಲ್ಲಿ ತ್ರೈಮಾಸಿಕ ಪ್ರವೃತ್ತಿಗಳು ಸಾಂಕ್ರಾಮಿಕದ ಉಬ್ಬರವಿಳಿತ ಮತ್ತು ಹರಿವನ್ನು ಅನುಸರಿಸಿದ್ದವು ಎಂದು ಹೇಳಿರುವ ವರದಿಯು,ಕೋವಿಡ್ ನಿರ್ಬಂಧಗಳಿಂದಾಗಿ ಸರಕುಗಳ ಪೂರೈಕೆಯಲ್ಲಿನ ಅಡಚಣೆಗಳು ಮತ್ತು ಸುದೀರ್ಘ ವಿತರಣೆ ಅವಧಿಗಳಿಂದಾಗಿ ಸಾಗಾಣಿಕೆ ವೆಚ್ಚಗಳು ಹೆಚ್ಚಾಗಿದ್ದು ಅವುಗಳ ಬೆಲೆಗಳು ಮತ್ತು ಹಣದುಬ್ಬರ ಏರಿಕೆಗೆ ಕಾರಣವಾಗಿತ್ತು ಎಂದು ಬೆಟ್ಟು ಮಾಡಿದೆ.