ಮುಂಬೈ: ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ. 4.40 ಕ್ಕೆ ಹೆಚ್ಚಿಸಿದ್ದು, ಆರ್ ಬಿಐನ ಈ ಅಚ್ಚರಿ ನಡೆಗೆ ಭಾರತೀಯ ಷೇರುಮಾರುಕಟ್ಟೆ ಆಘಾತಕ್ಕೊಳಗಾಗಿದೆ.
ರೆಪೋದರ ಏರಿಕೆ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ಕುಸಿದಿದ್ದು, ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ ಬರೊಬ್ಬರಿ ಶೇ.2.29ರಷ್ಟು ಅಂದರೆ 1,306.96 ಅಂಕಗಳ ಕುಸಿತಗೊಂಡು 55,669.03 ಅಂಕಗಳಿಗೆ ತಲುಪಿದೆ. ಇದು ಈ ವಾರದ ವಹಿವಾಟಿನ ಸತತ ಮೂರನೇ ನಕಾರಾತ್ಮಕ ವಹಿವಾಟಾಗಿದೆ. ಇದೇ ರೀತಿ ಎನ್‌ಎಸ್‌ಇ ನಿಫ್ಟಿ ಕೂಡ 2.29 ರಷ್ಟು ಅಂದರೆ 391.50 ಅಂಕಗಳ ಕಳೆದುಕೊಂಡಿದ್ದು, 16,677.60 ಅಂಕಗಳಿಗೆ ಕುಸಿದಿದೆ.
ಮಾರುಕಟ್ಟೆ ದಿಢೀರ್ ಕುಸಿತಕ್ಕೆ ಹೂಡಿಕೆದಾರರ ಅತಂಕ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದು, ಅಮೆರಿಕ ಫೆಡರಲ್ ಬ್ಯಾಂಕ್ ಕೂಡ ಆರ್ ಬಿಐ ನಂತೆಯೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ. ಇದೇ ಕಾರಣಕ್ಕೆ ಹೂಡಿಕೆದಾರರು ಏಕಾಏಕಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು ಮಾರುಕಟ್ಟೆಯ ಹಾಲಿ ಪರಿಸ್ಥಿತಿಗೆ ಕಾರಣ ಎಂದು ಹೇಳಲಾಗಿದೆ.
ಹೂಡಿಕೆದಾರರ 6.27 ಲಕ್ಷ ಕೋಟಿ ನಷ್ಟ
ಇಂದಿನ ವಹಿವಾಟಿನಲ್ಲಿ ಎಲ್ಲಾ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳದ ಪೈಕಿ ರೂ.6.27 ಲಕ್ಷ ಕೋಟಿಗಳಷ್ಟು ನಷ್ಟವಾಗಿ ಬಂಡವಾಳ ಪ್ರಮಾಣ ರೂ.2,59,60,852.44 ಕೋಟಿಗೆ ಕುಸಿದಿದೆ.
ಬಜಾಜ್ ಫೈನಾನ್ಸ್ ಗೆ ಹೆಚ್ಚಿನ ನಷ್ಟ
ಸೆನ್ಸೆಕ್ಸ್ ನಲ್ಲಿ ಬಜಾಜ್ ಫೈನಾನ್ಸ್ ಅತಿ ಹೆಚ್ಚು ನಷ್ಟ ಅನುಭವಿಸಿದ್ದು, ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ. 4.29 ರಷ್ಟು ಕುಸಿದಿದೆ. ನಂತರದ ಸ್ಥಾನದಲ್ಲಿ ಬಜಾಜ್ ಫಿನ್‌ಸರ್ವ್, ಟೈಟಾನ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಮತ್ತು ಆರ್‌ಐಎಲ್ ಕಂಪನಿಗಳು ನಷ್ಟ ಅನುಭವಿಸಿದ ಪಟ್ಟಿಯಲ್ಲಿವೆ.
ಇತ್ತ ಪವರ್‌ಗ್ರಿಡ್, ಎನ್‌ಟಿಪಿಸಿ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಶೇ.2.75ರಷ್ಟು ಏರಿಕೆ ಕಂಡಿವೆ. ಇಂದು ಷೇರುಮಾರುಕಟ್ಟೆಯ 2,548 ಸಂಸ್ಥೆಯ ಷೇರುಗಳು ಕುಸಿತ ಕಂಡಿದ್ದರೆ, 826 ಸಂಸ್ಥೆಗಳ ಷೇರುಗಳು ಏರಿಕೆ ಕಂಡಿವೆ. ಅಂತೆಯೇ 101 ಸಂಸ್ಥೆಗಳ ಷೇರುಗಳ ಮೌಲ್ಯ ಬದಲಾಗದೆ ಉಳಿದಿವೆ.