ಗುವಾಹಟಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅಸ್ಸಾಂಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮುನ್ನ ಇಲ್ಲಿನ ಉಗ್ರಗಾಮಿ ಸಂಘಟನೆ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿಗೆ (ಎಎಎನ್‌ಎಲ್‌ಎ) ಸೇರಿದ 13 ಉಗ್ರರು ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಗೆ ಶಸ್ತ್ರಾಸ್ತ್ರ ಸಹಿತ ಶರಣಾಗಿದ್ದಾರೆ.

ಬೊಕಾಜಾನ್‌ನಲ್ಲಿ ಅಸ್ಸಾಂ ಪೊಲೀಸರು, ಅಸ್ಸಾಂ ರೈಫಲ್ಸ್ ಮತ್ತು ಸಿಆರ್‌ಪಿಎಫ್‌ನ 20ನೇ ಬೆಟಾಲಿಯನ್ ಸಿಬ್ಬಂದಿ ಮುಂದೆ ಶರಣಾಗಿರುವ ಉಗ್ರರು ಮುಖ್ಯವಾಹಿನಿಗೆ ಸೇರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಅವರು ಬಾಂಗ್ಲಾದೇಶದ ಗಡಿಯಲ್ಲಿರುವ ಮಂಕಾಚಾರ್‌ನ ಬಿಎಸ್‌ಎಫ್ ಗಡಿಯ ಹೊರಠಾಣೆಗೆ ಭೇಟಿ ನೀಡಲಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಗುವಾಹಟಿಯಲ್ಲಿ ಶಾ ಅವರು ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
2006ರಲ್ಲಿ ಅಸ್ತಿತ್ವಕ್ಕೆ ಬಂದ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿಯು ಅಸ್ಸಾಮಿನ ಚಹಾ ತೋಟಗಳಲ್ಲಿ ಕಾರ್ಮಿಕರಾಗಿರುವ ಆದಿವಾಸಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕೆಂದು ಹೋರಾಟ ಮಾಡುತ್ತಿದೆ. ಈ ಸಂಘಟನೆಯು ಮುಖ್ಯವಾಗಿ ಕರ್ಬಿ ಆಂಗ್ಲಾಂಗ್ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ನೆಲೆಯೂರಿದ್ದು, ಈ ಹಿಂದೆ ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.