ಮಂಗಳೂರು: ಮಂಗಳೂರಿನ ಹೊರವಲಯದ ಮಳಲಿ ಮಸೀದಿ ನವೀಕರಣ ವೇಳೆ ದೇವಾಲಯ ಮಾದರಿಯ ಕಂಬ,. ವಿನ್ಯಾಸ ಇತ್ಯಾದಿ ಪತ್ತೆಯಾದ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ಪತ್ತೆಗಾಗಿ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ತಾಂಬೂಲ ಪ್ರಶ್ನೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ವಾತಾವರಣ ನಿರ್ಮಾಣವಾಗದಿರಲು ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಸದ್ಯ ಕೇರಳದ ತಂತ್ರಿಗಳು ರಾಮಾಂಜನೇಯ ಭಜನಾ ಮಂದಿರಕ್ಕೆ ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ವಿವಾದಿತ ಮಳಲಿ ಮಸೀದಿ ಸ್ಥಳದ ಇತಿಹಾಸ ತಿಳಿಯಲು ತಾಂಬೂಲ ಪ್ರಶ್ನೆ ಬೆಳಗ್ಗೆ 8 ಗಂಟೆಗೆ ಆರಂಭವಾಗುತ್ತದೆ. ಮಸೀದಿಯ 500 ಮೀಟರ್ ದೂರದಲ್ಲಿ ದೈವೀ ಶಕ್ತಿ ಪತ್ತೆ ಕಾರ್ಯ ನಡೆಯುತ್ತದೆ. ಕೇರಳ ಮೂಲದ ಪೊದುವಾಲ್ರಿಂದ ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆಯುತ್ತದೆ. ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ತಾಂಬೂಲ ಪ್ರಶ್ನೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮಳಲಿ ಮಸೀದಿ ಸುತ್ತಮುತ್ತ ದೈವೀ ಶಕ್ತಿ ಇದೆಯಾ ಎಂಬ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ವೀಳ್ಯದೆಲೆ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆ ಮಾಡಲಾಗುವುದು.
ಅಷ್ಟಮಂಗಲ ಪ್ರಶ್ನೆ ಬದಲು ಇಂದು ತಾಂಬೂಲ ಪ್ರಶ್ನೆ ನಡೆಸಲಾಗುತ್ತದೆ. ಸರಳ ವಿಧಾನಗಳ ಮೂಲಕ ಸತ್ಯಾಸತ್ಯತೆ ಅರಿಯುವ ತಂತ್ರಿಗಳು ಪ್ರಯತ್ನಿಸುತ್ತಾರೆ.
ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು.
ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು. ಇದರ ನಡುವೆ ವಿಹೆಚ್‌ಪಿ ಇಂದು ತಾಂಬೂಲ ಪ್ರಶ್ನೆ ಇಡುತ್ತಿದ್ದು, ಈ ಪ್ರಶ್ನೆಯಲ್ಲಿ ಸಿಕ್ಕ ಅಂಶದಂತೆ ಮುಂದುವರಿಯಲು ತೀರ್ಮಾನಿಸಿದೆ.