ಉಡುಪಿ: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಹುಂಡಿಯ ಮಾಸಿಕ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಏಪ್ರಿಲ್ ನಲ್ಲಿ 1,53,41,923 ರೂ. ಸಂಗ್ರಹವಾಗಿದೆ.
ಈ ವರ್ಷದ ಜನವರಿಯಿಂದ, ಕರ್ನಾಟಕದ ಈ ಎರಡನೇ ಶ್ರೀಮಂತ ದೇವಾಲಯಕ್ಕೆ ಪ್ರತಿದಿನ 10,000ಕ್ಕೂ ಹೆಚ್ಚು ಜನರು ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಕೋವಿಡ್ ಸಾಂಕ್ರಾಮಿಕದ ವೇಳೆ ಪ್ರಯಾಣದ ನಿರ್ಬಂಧದಿಂದಾಗಿ ಹೊರ ರಾಜ್ಯಗಳಿಂದ ಭಕ್ತರು ಬರುವುದನ್ನು ನಿಲ್ಲಿಸಿದ್ದರು, ಆದರೆ ಈಗ ಕೇರಳ ಮತ್ತು ತಮಿಳುನಾಡಿನಿಂದ ಹೆಚ್ಚಿನ ಭಕ್ತರು ಬರುತ್ತಿದ್ದಾರೆ.
ಪ್ರತಿ ತಿಂಗಳು ಈ ದೇವಸ್ಥಾನದಲ್ಲಿನ ಹುಂಡಿ ಸಂಗ್ರಹ ಎಣಿಕೆಯಾಗುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ದಾಖಲೆಯ ಆದಾಯವಾಗಿದೆ. ಸರಾಸರಿ 65 ಲಕ್ಷ ರೂ. ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ ಸಂಗ್ರವಾಗಿತ್ತು.
2,575 ಗ್ರಾಂ ಚಿನ್ನ ಮತ್ತು 4,200 ಗ್ರಾಂ ಬೆಳ್ಳಿಯನ್ನು ಭಕ್ತರು ಅರ್ಪಿಸಿದ್ದಾರೆ. ಈ ಸಂಗ್ರಹವು ದೇವಾಲಯದ ಸಾರ್ವಕಾಲಿಕ ಏರಿಕೆಯಾಗಿದೆ. ಮೇ 9 ಮತ್ತು ಮೇ 10 ರಂದು ಎಣಿಕೆ ಕಾರ್ಯ ನಡೆದಿತ್ತು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಪಿ.ಬಿ ಹೇಳಿದ್ದಾರೆ.