ಅಂಬಾಲಾ: ತಂಪು ಪಾನೀಯದ ಮುಚ್ಚಳ ತೆರೆಯುವಾಗ ವಿದ್ಯಾರ್ಥಿಯೊಬ್ಬ ಗಂಟಲಿಗೆ ಸಿಲುಕಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ. 11ನೇ ತರಗತಿ ವಿದ್ಯಾರ್ಥಿ ಯಶ್ ಮೃತ ಬಾಲಕ. ಹರಿಯಾಣದ ಅಂಬಾಲಾದಲ್ಲಿ ಮೊನ್ನೆ ರಾತ್ರಿ ಈ ಘಟನೆ ನಡೆದಿತ್ತು.
ತಂಪು ಪಾನೀಯದ ಮುಚ್ಚಳವನ್ನು ಕಚ್ಚಿ ತೆರೆಯುವ ಯತ್ನದ ಮಧ್ಯೆ ಮುಚ್ಚಳ ಗಂಟಲಿಗೆ ಸಿಲುಕಿಕೊಂಡಿತು. ಮನೆಯವರು ಮುಚ್ಚಳ ತೆಗೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ವಿಫಲಗೊಂಡು ಬಾಲಕ ಕೊನೆಯುಸಿರೆಳೆದ. ಉಸಿರುಗಟ್ಟಿ ಸಾವನ್ನಪ್ಪಿದ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ತಂಗಿಗೆ ಬಾಟಲಿ ಮುಚ್ಚಳ ತೆರೆಯಲಾಗದ ಹಿನ್ನೆಲೆಯಲ್ಲಿ ಯಶ್ ತೆರೆಯಲು ಯತ್ನಿಸಿ ಬಳಿಕ ದುರ್ಘಟನೆ ನಡೆಯಿತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.