ನವದೆಹಲಿ :ಪ್ರಮುಖ ಮೆಸೇಜಿಂಗ್ ಆಯಪ್ ವಾಟ್ಸಪ್ ಮಾರ್ಜ್ ತಿಂಗಳಲ್ಲಿ ಕನಿಷ್ಟ 18 ಲಕ್ಷ ಭಾರತೀಯ ಖಾತೆಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ. ವಾಟ್ಸಪ್ ಇತ್ತೀಚಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ನಿಯಮ ಉಲ್ಲಂಘಿಸಿದ ಖಾತೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದೆ.
ಸರ್ಕಾರವು ಜಾರಿಗೆ ತಂದಿರುವ ಐಟಿ ಕಾಯ್ದೆ 2021 ರ ಅಡಿಯಲ್ಲಿ ನಿಯಮ ಉಲ್ಲಂಘಿಸುವ ವಾಟ್ಸಪ್ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ವಾಟ್ಸಪ್ ಮೂಲಗಳು ತಿಳಿಸಿದೆ. ಕುಂದುಕೊರತೆಗಳ ವಿಭಾಗದ ಮೂಲಕ ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ಆಧಾರದ ಮೇಲೆ ಮತ್ತು ಉಲ್ಲಂಘನೆಗಳನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ತನ್ನದೇ ಆದ ಕಾರ್ಯವಿಧಾನದ ಮೂಲಕ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಅಲ್ಲದೆ, ಹಲವು ಸುರಕ್ಷತಾ ಟೂಲ್ ಗಳನ್ನು ಬಳಸಿ ಅಪಾಯಕಾರಿ ಮತ್ತು ಹಾನಿಕಾರಕ ನಡವಳಿಕೆಗಳನ್ನು ಪತ್ತೆ ಹಚ್ಚಿ ಅಂತಹ ಖಾತೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ.
'ಅಪಾಯಕಾರಿ ಘಟನೆ ನಡೆದ ಬಳಿಕ ಅದರ ಮೂಲ ಪತ್ತೆ ಹಚ್ಚುವುದಕ್ಕಿಂತಲೂ , ಇಂತಹ ಘಟನೆಗಳು ನಡೆಯದಂತೆ ತಡೆಯಲು ನಾವು ಒತ್ತು ನೀಡುವುದಾಗಿ' ವಾಟ್ಸಪ್ ಕಂಪನಿ ತನ್ನ ಹೇಳಿದೆ.
ಫೆಬ್ರವರಿಯಲ್ಲೂ 14 ಲಕ್ಷ ಅಕೌಂಟ್ ಗಳನ್ನು ಬ್ಯಾನ್ ಮಾಡಿದ್ದ ವಾಟ್ಸಪ್, ಅಕೌಂಟ್ ರಿಜಿಸ್ಟ್ರೇಷನ್ ವೇಳೆ, ಹಾಗೂ ಬಳಕೆಯ ವೇಳೆ ಋಣಾತ್ಮಕ ಫೀಡ್ ಬ್ಯಾಕ್ ಬಂದ ಸಂದರ್ಭದಲ್ಲಿ ವಾಟ್ಸಪ್ ಖಾತೆಗಳ ಕುರಿತು ಮಾಹಿತಿ ಕಲೆ ಹಾಕಲು ಸೂಕ್ತ ಕ್ರಮ ಜರುಗಿಸುತ್ತೇವೆ ಎಂದಿದೆ.
ಬಳಕೆದಾರರು ಯಾವುದೇ ಒಂದು ಖಾತೆಯ ಕುರಿತು ರಿಪೋರ್ಟ್ ಮಾಡಿದಾಗ ಹಾಗೂ ಅದನ್ನು ಸ್ಪ್ಯಾಮ್ ಅಥವಾ ಬ್ಲಾಕ್ ಮಾಡಿದಾಗ ನಾವು ಅದನ್ನು ವಿಶ್ಲೇಷಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾಟ್ಸಪ್ ತಿಳಿಸಿರುವುದಾಗಿ ವರದಿಯಾಗಿದೆ.
ಕೇಂದ್ರ ಸರ್ಕಾರದ ಐಟಿ ಕಾಯ್ದೆ 2021 ರ ಪ್ರಕಾರ, ಸಾಮಾಜಿಕ ಜಾಲತಾಣ ಕಂಪನಿಗಳು ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದ್ದು, ಅದರಂತೆ ಸಲ್ಲಿಸಿದ ವರದಿಯಲ್ಲಿ 18 ಲಕ್ಷ ಖಾತೆಗಳನ್ನು ನಿಷೇಧಿಸಿರುವ ಕುರಿತು ವಾಟ್ಸಪ್ ಮಾಹಿತಿ ನೀಡಿದೆ.