ನವದೆಹಲಿ: ಇಂದು ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ,(National technology day) ಈ ಸಂದರ್ಭದಲ್ಲಿ ದೇಶದ ವಿಜ್ಞಾನಿಗಳಿಗೆ ಧನ್ಯವಾದ ಹೇಳಿರುವ ಪ್ರಧಾನಿ ನರೇಂದ್ರ ಮೋದಿ 1998ರಲ್ಲಿ ಪೋಕ್ರಾನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದರ ಹಿಂದಿನ ವಿಜ್ಞಾನಿಗಳ ಶ್ರಮವನ್ನು ಕೊಂಡಾಡಿದ್ದಾರೆ.
1998ರ ಪೋಕ್ರಾನ್ ಟೆಸ್ಟ್ ನ ವಿಡಿಯೊವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ವಿಶಿಷ್ಟ ನಾಯಕತ್ವವನ್ನು ಸಹ ಸ್ಮರಿಸಿದ್ದಾರೆ. ಅಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಅದ್ವಿತೀಯ ರಾಜಕೀಯ ಧೈರ್ಯ ಮತ್ತು ನಾಯಕತ್ವವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ಮೇ 1998 ರಲ್ಲಿ ರಾಜಸ್ಥಾನದ ಭಾರತೀಯ ಸೇನೆಯ ಪೋಖ್ರಾನ್ ಪರೀಕ್ಷಾ ಶ್ರೇಣಿಯಲ್ಲಿ ಭಾರತವು ಪೋಖ್ರಾನ್- 2 ಪರೀಕ್ಷೆಗಳನ್ನು ನಡೆಸಿತು, ಇದು ಐದು ಪರಮಾಣು ಸ್ಫೋಟಗಳ ಸರಣಿ ಪರೀಕ್ಷೆಯಾಗಿದೆ. ಪೋಖ್ರಾನ್-II ಪರೀಕ್ಷೆಗಳ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ.