ಶ್ರೀನಗರ: ಜಮ್ಮು-ಕಾಶ್ಮೀರ ಪ್ರತ್ಯೇಕವಾದಿ ಮುಖಂಡ ಯಾಸಿನ್ ಮಲ್ಲಿಕ್ ಗೆ ಶಿಕ್ಷೆ ಪ್ರಕಟವಾದ ಮೇ 25 ರಂದು ಆತನ ಮನೆ ಹೊರಗಡೆ ಕಲ್ಲು ತೂರಾಟ ನಡೆಸಿ, ದೇಶ ವಿರೋಧಿ ಘೋಷಣೆ ಕೂಗಿದ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರಿಗೆ ಆರ್ಥಿಕ ನೆರವು ಕೇಸ್ ನಲ್ಲಿ ಮುಂಚೂಣಿ ಪ್ರತ್ಯೇಕವಾದಿ ಮುಖಂಡನಾಗಿದ್ದ ಮಲಿಕ್ ಗೆ ದೆಹಲಿಯ ನ್ಯಾಯಾಲಯವೊಂದು ಮೇ 25 ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತು. ಅಂದು ಯಾಸಿನ್ ಮಲ್ಲಿಕ್ ಮನೆಯ ಹೊರಗಡೆ ಕಲ್ಲು ತೂರಾಟ ನಡೆಸಿ, ದೇಶ ವಿರೋಧಿ ಘೋಷಣೆ ಕೂಗಿದ್ದ 19 ಆರೋಪಿಗಳನ್ನು ಈವರೆಗೂ ಬಂಧಿಸಲಾಗಿದೆ ಎಂದು ಶ್ರೀನಗರ ಪೊಲೀಸರು ಟ್ವೀಟ್ ನಲ್ಲಿ ತಿಳಿಸದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 26 ರಂದು 10 ಜನರನ್ನು ಪೊಲೀಸರು ಬಂಧಿಸಿದ್ದರು. ಇಂತಹ ಚಟುವಟಿಕೆಗಳನ್ನು ಮುಂದೆ ಸಹಿಸುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.