ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ಚೀನಾವನ್ನು ಹಿಂದಿಕ್ಕಿದ ಅಮೆರಿಕವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂಡೋ-ಪೆಸಿಫಿಕ್ ಭಾಗದಲ್ಲಿ ಸ್ವಹಿತ ಕಾಪಾಡಲುವ ಸಲುವಾಗಿ ಭಾರತದ ಜತೆಗೆ ಹೆಚ್ಚಿನ ಪಾಲುದಾರಿಕೆಗೆ ಅಮೆರಿಕ ಒತ್ತು ನೀಡುತ್ತಿರುವುದು ಈ ಮೂಲಕ ದೃಢಪಟ್ಟಿದೆ.
ಅಮೆರಿಕ ಜತೆಗಿನ ವಹಿವಾಟು: ಅಮೆರಿಕಕ್ಕೆ 2021-22ರಲ್ಲಿ ರಫ್ತು ಪ್ರಮಾಣ 76.11 ಶತಕೋಟಿ ಡಾಲರ್ ಆಗಿದೆ. ಆಮದು ಪ್ರಮಾಣ 2021-22ರಲ್ಲಿ 43.31 ಶತಕೋಟಿ ಡಾಲರ್ ಆಗಿದೆ. 2020-21ರಲ್ಲಿ ವ್ಯಾಪಾರ ಕೊರತೆ 23 ಶತಕೋಟಿ ಡಾಲರ್ ಇತ್ತು. ಮುತ್ತು- ರತ್ನ, ವಜ್ರಗಳು, ಫಾರ್ವಸ್ಯುಟಿಕಲ್ಸ್, ಮಷಿನರಿ, ಎಲೆಕ್ಟ್ರಾನಿಕ್ಸ್, ಉಡುಪು, ವಾಹನ, ರಾಸಾಯನಿಕಗಳು, ಮೀನು ಉತ್ಪನ್ನ, ಆಪ್ಟಿಕಲ್, ಫೋಟೋ, ಮೆಡಿಕಲ್ ಅಪ್ಪಾರಟಸ್ ಮತ್ತು ಅಲ್ಯುಮಿನಿಯಂ ಪ್ರಮುಖ ವ್ಯಾಪಾರ ವಸ್ತುಗಳು.
ಚೀನಾ ಜತೆಗಿನ ವ್ಯಾಪಾರ: ಚೀನಾಕ್ಕೆ ಭಾರತದಿಂದ ರಫ್ತು ಪ್ರಮಾಣ 2020-21ರಲ್ಲಿ 21.18 ಶತಕೋಟಿ ಡಾಲರ್ ಮತ್ತು ಕಳೆದ ಆರ್ಥಿಕ ವರ್ಷ 21.25 ಶತಕೋಟಿ ಡಾಲರ್ ಆಗಿದೆ. ಆಮದು ಪ್ರಮಾಣ ಗಮನಿಸಿದರೆ, 2020-21ರಲ್ಲಿ 65.21 ಶತಕೋಟಿ ಡಾಲರ್ ಇದ್ದದ್ದು 2021-22ರಲ್ಲಿ 94.16 ಶತಕೋಟಿ ಡಾಲರ್ ಆಗಿದೆ. ವ್ಯಾಪಾರ ಕೊರತೆ ಪ್ರಮಾಣ 2020-21ರಲ್ಲಿ 44 ಶತಕೋಟಿ ಡಾಲರ್ ಇದ್ದದ್ದು, 2021-22ರಲ್ಲಿ 72.91 ಶತಕೋಟಿ ಡಾಲರ್ ತಲುಪಿದೆ.
ಅಮೆರಿಕ-ಭಾರತ ವ್ಯಾಪಾರ ಸಾಮರ್ಥ್ಯ: ವಿಶೇಷವಾಗಿ ಟ್ರಂಪ್ ಅವರ ಅಧಿಕಾರಾವಧಿಯಲ್ಲಿ ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಯುದ್ಧದ ನಂತರದ ಅವಧಿಯಲ್ಲಿ ಚೀನಾವನ್ನು ಮೀರಿ ವೈವಿಧ್ಯಮಯ ರೀತಿಯಲ್ಲಿ ಉಭಯ ದೇಶಗಳ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿ ಬೆಳವಣಿಗೆಗೆ ಸಾಕಷ್ಟು ಸಾಮರ್ಥ್ಯವಿದೆ. ಅಮೆರಿಕ - ಭಾರತ ವ್ಯಾಪಾರ ಸಂಬಂಧಗಳ ಪೈಕಿ ಡಿಜಿಟಲ್ ಆರ್ಥಿಕತೆ, ಸೇವೆಗಳು, ಆರೋಗ್ಯ-ಸಂಬಂಧಿತ ವ್ಯಾಪಾರ ಮತ್ತು ಕೃಷಿಯನ್ನು ಸಂಭಾವ್ಯ ಬೆಳವಣಿಗೆಯ ಕ್ಷೇತ್ರಗಳೆಂದು ಗುರುತಿಸಲಾಗಿದೆ. ಸಾಂಪ್ರದಾಯಿಕ ರಫ್ತು ಕ್ಷೇತ್ರಗಳಾದ ಉಡುಪುಗಳು, ರತ್ನಗಳು ಮತ್ತು ಆಭರಣಗಳು, ರಾಸಾಯನಿಕಗಳು, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರೋಪಕರಣಗಳ ಬೆಳವಣಿಗೆಗೆ ಅವಕಾಶವಿದೆ. ಹೂಡಿಕೆಯ ಕ್ಷೇತ್ರದಲ್ಲಿ, ಭಾರತವು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಎಫ್ಡಿಐ ಅಡೆತಡೆಗಳನ್ನು ಕಡಿಮೆ ಮಾಡಿದೆ, ಇತ್ತೀಚಿಗೆ ರಕ್ಷಣೆಯಲ್ಲಿ, ಮತ್ತು ಸಹಯೋಗಕ್ಕೂ ಅವಕಾಶ ಒದಗಿಸಿದೆ.
ಐಪಿಇಎಫ್ ಉಪಕ್ರಮಕ್ಕೆ ಪೂರಕ: ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಮುಂಬರುವ ವರ್ಷಗಳಲ್ಲೂ ವೃದ್ಧಿಯಾಗಲಿದೆ. ಇದು ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿಗೆ (ಐಪಿಇಎಫ್) ಪೂರಕವಾಗಿದೆ. ಅಮೆರಿಕ ಕೂಡ ಇದೇ ಚೌಕಟ್ಟಿನ ಪ್ರಕಾರ ಭಾರತದ ಜತೆಗಿನ ವ್ಯಾಪಾರ ಸಂಬಂಧ ವೃದ್ಧಿಸಲು ಮುಂದಾಗಿದೆ. ಚೀನಾದ ಪ್ರಾಬಲ್ಯ ತಪ್ಪಿಸಲು ಇದು ಸಹಕಾರಿ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಖಾಲಿದ್ ಖಾನ್ ವಿವರಿಸಿದರು.
ಜಗತ್ತಿನ ಮುಂದುವರಿದ ರಾಷ್ಟ್ರಗಳ ಪಾಲಿಗೆ ಭಾರತವು ವಿಶ್ವಾಸಾರ್ಹ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ಅನೇಕ ಜಾಗತಿಕ ಸಂಸ್ಥೆಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿವೆ. ಇತರೆ ದೇಶಗಳ ವ್ಯಾಪಾರ ಚಟುವಟಿಕೆಗೆ ಭಾರತ ವೈವಿಧ್ಯತೆ ಕೊಡುತ್ತಿದೆ.
ಖಾಲಿದ್ ಖಾನ್ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ
ವ್ಯಾಪಾರ ಪಾಲುದಾರಿಕೆ: 2021-22 ರಲ್ಲಿ, ಭಾರತ -ಅಮೆರಿಕ ನಡುವೆ 32.8 ಶತಕೋಟಿ ಡಾಲರ್ ಹೆಚ್ಚುವರಿ ವ್ಯಾಪಾರ ಆಗಿತ್ತು. 2013-14 ರಿಂದ 2017-18 ರವರೆಗೆ ಮತ್ತು 2020-21 ರಲ್ಲಿ ಚೀನಾ ಭಾರತದ ಅಗ್ರ ವ್ಯಾಪಾರ ಪಾಲುದಾರ ಆಗಿತ್ತು. ಚೀನಾಕ್ಕಿಂತ ಮೊದಲು, ಯುಎಇ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. 2021-22 ರಲ್ಲಿ, ಯುಎಇ 72.9 ಶತಕೋಟಿ ಡಾಲರ್ ವ್ಯಾಪಾರದೊಂದಿಗೆ ಭಾರತದ 3ನೇ ಅತಿದೊಡ್ಡ ಪಾಲುದಾರ ಆಗಿತ್ತು. ಸೌದಿ ಅರೇಬಿಯಾ (42,85 ಶತಕೋಟಿ ಡಾಲರ್), ಇರಾಕ್ (34.33 ಶತಕೋಟಿ ಡಾಲರ್) ಮತ್ತು ಸಿಂಗಾಪುರ (30 ಶತಕೋಟಿ ಡಾಲರ್) ನಂತರದ ಸ್ಥಾನಗಳಲ್ಲಿವೆ.