ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸಿ, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಬಳಿಕ ವಿಧಾನಸಭೆಯಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆಯ ತಿಂಡಿ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ಘೋಷಿಸಿದರು.
ಬಸ್ ನಂಬರ್ 29ಸಿ ಯಲ್ಲಿ ಸಂಚರಿಸಿದ ಅವರು, ರಾಜ್ಯ ಸರ್ಕಾರ ಮಹಿಳೆಯರಿಗೆ ಒದಗಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯದ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರ ಬಳಿ ವಿಚಾರಿಸಿದರು. ನಂತರ ವಿಧಾನಸಭೆಗೆ ತೆರಳಿ, ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿ ಮಕ್ಕಳಿಗೆ ಬೆಳಿಗ್ಗೆಯ ತಿಂಡಿ ನೀಡುವುದಾಗಿ ಘೋಷಿಸಿದರು. ಜನರ ಆರೋಗ್ಯ ಅಗತ್ಯಗಳಿಗಾಗಿ ನಗರಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವುದಾಗಿ ತಿಳಿಸಿದರು. ಇದೇ ವೇಳೆ, ಒಂದು ವರ್ಷದಲ್ಲಿ ಡಿಎಂಕೆ ಸರ್ಕಾರ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾಧನೆಯನ್ನು ಸ್ಮರಿಸಿದರು.
ಬಳಿಕ ಸರ್ಕಾರ ರಚನೆಯಾಗಿ ಒಂದು ವರ್ಷ ಪೂರ್ಣಗೊಂಡ ಸ್ಮರಣಾರ್ಥ ಡಿಎಂಕೆ ಸಂಸ್ಥಾಪಕರಾದ ಸಿ.ಎನ್.ಅಣ್ಣಾದುರೈ ಮತ್ತು ತಂದೆ ಎಂ.ಕರುಣಾನಿಧಿ ಅವರ ಸ್ಮಾರಕಕ್ಕೆ ನಮಿಸಿದರು.
ತಮಿಳುನಾಡಿನಲ್ಲಿ 10 ವರ್ಷಗಳ ಕಾಲ ವಿಪಕ್ಷ ಸ್ಥಾನದಲ್ಲಿದ್ದ ಡಿಂಎಕೆ 2021ರ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ ಕಳೆದ ವರ್ಷ ಮೇ 7ರಂದು ಸರ್ಕಾರ ರಚನೆ ಮಾಡಿದೆ.