ತಿರುವನಂತಪುರಂ: ಬಾಕಿ ಒಂದು ರೂಪಾಯಿ ಕೇಳಿದ್ದಕ್ಕೆ ಬಸ್ ಕಂಡಕ್ಟರ್ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಕೇರಳದ ಪೆರೂರ್ಕಡದಲ್ಲಿ ನಡೆದಿದೆ.
ಸಂತ್ರಸ್ತ ಪ್ರಯಾಣಿಕನನ್ನು ಕಲ್ಲಂಬಳಂ ಮೂಲದ ಶಿರಾಸ್ ಎಂದು ಗುರುತಿಸಲಾಗಿದೆ.
ಹೊಡೆತ ತಿಂದ ಶಿರಾಸ್ಗೂ ಮುನ್ನವೇ ಕಂಡಕ್ಟರ್ ಆತನ ವಿರುದ್ಧ ದೂರು ದಾಖಲಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡ್ರಾಮಾ ಮಾಡಿದ್ದಾನೆ.
ಬಾಕಿ ಹಣ ಕೇಳಿದ್ದಕ್ಕೆ ಇತರೆ ಪ್ರಯಾಣಿಕರ ಎದುರಲ್ಲೇ ಶಿರಾಸ್ ಮೇಲೆ ಕಂಡಕ್ಟರ್ ಹಲ್ಲೆ ಮಾಡಿದ್ದಾರೆ. ಈ ಘಟನೆ ಒಂದು ದಿನದ ಹಿಂದೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಕಂಡಕ್ಟರ್ ವಿರುದ್ಧ ದೂರು ದಾಖಲಿಸಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದಾಗ ಆರೋಪಿ ಕಂಡಕ್ಟರ್ ಕೂಡ ಸಂತ್ರಸ್ತ ಶಿರಾಸ್ ವಿರುದ್ಧ ದೂರು ದಾಖಲಿಸಿದ್ದಾನೆ. ಎರಡು ಕಡೆ ದೂರು ದಾಖಲಾಗಿರುವುದರಿಂದ ಗೊಂದಲಕ್ಕೀಡಾಗಿರುವ ಪೊಲೀಸರು ಸಹ ಪ್ರಯಾಣಿಕರ ಹೇಳಿಕೆ ಪಡೆದುಕೊಂಡಿದ್ದಾರೆ.
ಮೇಲ್ನೋಟಕ್ಕೆ ಕಂಡಕ್ಟರ್ನದ್ದೇ ತಪ್ಪು ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಸಾಧ್ಯತೆ ಇದೆ.