ಮುಂಬೈ: ದೇಶದ ಅತಿ ದೊಡ್ಡ ಐಪಿಒ, ಎಲ್ಐಸಿಯ ಸಾರ್ವಜನಿಕ ಆಫರ್ ಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದ್ದು, ಬಿಡುಗಡೆಯಾದ 2 ನೇ ದಿನವೇ ನಿರೀಕ್ಷಿತ ಗುರಿಗೂ ಮೀರಿ ಷೇರುಗಳಿಗೆ ಅರ್ಜಿಗಳು ಬಂದಿವೆ.
16,20,78,067 ಷೇರುಗಳನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಆದರೆ ಐಪಿಒ ತೆರೆದ 2 ನೇ ದಿನ 16,25,35,125 ಬಿಡ್ ಗಳನ್ನು ಎಲ್ಐಸಿ ಸ್ವೀಕರಿಸಿದ್ದು ಸಂಜೆ 6.24 ರ ಷೇರು ವಿನಿಮಯ ಡೇಟಾ ಪ್ರಕಾರ ನಿಗದಿತ ಷೇರು ಆಫರ್ ಗಿಂತಲೂ ಮೀರಿ ಬಿಡ್ ಬಂದಿವೆ.
ಒಟ್ಟು ಹೂಡಿಕೆಯ ಪೈಕಿ ಪಾಲಿಸಿ ಹೊಂದಿರುವವರ ವಿಭಾಗದ ಹೂಡಿಕೆಯಲ್ಲಿ ಮೂರು ಪಟ್ಟಿಗಿಂತಲೂ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ಉದ್ಯೋಗಿಗಳ ವಿಭಾಗದಲ್ಲಿ 2.14 ಪಟ್ಟು ಹೂಡಿಕೆಯಾಗಿದೆ.
ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಬಯರ್ (ಕ್ಯುಐಬಿ) ಹಾಗೂ ಸಾಂಸ್ಥಿಕವಲ್ಲದ ಹೂಡಿಕೆದಾರ (ಎನ್ಐಐ) ವಿಭಾಗ ಸಾಧಾರಣವಾದ ಪ್ರತಿಕ್ರಿಯೆ ಪಡೆದಿದೆ.
ಎನ್ಐಐ ಸೆಗ್ಮೆಂಟ್ ನಲ್ಲಿ ಶೇ.46 ರಷ್ಟು, ಕ್ಯುಐಬಿ ಭಾಗದಲ್ಲಿ ಶೇ.40 ರಷ್ಟು ಚಂದಾದಾರರಾಗಿದ್ದಾರೆ. ರೀಟೇಲ್ ವೈಯಕ್ತಿಕ ಹೂಡಿಕೆದಾರರು 6.9 ಕೋಟಿ ಷೇರುಗಳ ಪೈಕಿ ಶೇ.91 ರಷ್ಟು ಷೇರುಗಳನ್ನು ಖರೀದಿಸಿದ್ದು, ಐಪಿಒ ಮೇ.09 ಕ್ಕೆ ಮುಕ್ತಾಯಗೊಳ್ಳಲಿದೆ.
ವಿಮೆ ಕಂಪನಿಯಲ್ಲಿ ಸರ್ಕಾರ ತನ್ನ ಶೇ.3.5 ರಷ್ಟು ಪಾಲನ್ನು ಹಿಂಪಡೆಯುವ ಮೂಲಕ 21,000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿ ಹೊಂದಿದೆ. ಪ್ರತಿ ಷೇರಿಗೆ ಎಲ್ಐಸಿ 902-949 ರೂಪಾಯಿಗಳನ್ನು ಎಲ್ಐಸಿ ನಿಗದಿಪಡಿಸಿದೆ.