HEALTH TIPS

ಕೋವಿಡ್ ಕಾಲದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಭಾರಿ ಏರಿಕೆ: 2008ಕ್ಕೆ ಹೋಲಿಸಿದರೆ 13 ಪಟ್ಟು ಹೆಚ್ಚಳ; ಎನ್​ಸಿಆರ್​ಬಿ ಅಂಕಿ-ಅಂಶ..

               ನವದೆಹಲಿ: ಕೋವಿಡ್ ಸಂಕಷ್ಟದ ಸಾಮಾಜಿಕ ಪರಿಣಾಮ ಘೋರ ವಾಗಿದ್ದು, 2 ವರ್ಷಗಳ ಅವಧಿಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಗಣನೀಯವಾಗಿ ಏರಿಕೆಯಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಅವರನ್ನು ಸಂವೇದನಾಶೀಲರನ್ನಾಗಿಸಬೇಕು ಎಂದು ಮಕ್ಕಳ ಹಕ್ಕುಗಳ ಎನ್​ಜಿಒಗಳು ಕರೆ ನೀಡಿವೆ.

           ಪರಿಸ್ಥಿತಿ ಕೈ ಮೀರುವ ಮುನ್ನವೇ ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಬಲಪಡಿಸಬೇಕು. ಪಾಲಕರಿಗೆ ತರಬೇತಿ ನೀಡಿ, ಅವರನ್ನು ಸಂವೇದನಾಶೀಲರನ್ನಾಗಿಸಬೇಕು. ಈ ಸಂಬಂಧ ಅಗತ್ಯ ಅನುದಾನವನ್ನು ಬಜೆಟ್​ನಲ್ಲಿ ಹಂಚಿಕೆ ಮಾಡಬೇಕು ಎಂದು ಎನ್​ಜಿಒಗಳು ಆಗ್ರಹಿಸಿವೆ.

               ನಾಪತ್ತೆ ಪ್ರಕರಣ ಎಷ್ಟು?: ನ್ಯಾಷನಲ್ ಕ್ರೖೆಮ್ ರೆಕಾರ್ಡ್ಸ್ ಬ್ಯೂರೋ (ಎನ್​ಸಿಆರ್​ಬಿ) ಪ್ರಕಾರ, ದೇಶದಲ್ಲಿ 2020ರಲ್ಲಿ 59,262 ಮಕ್ಕಳು ನಾಪತ್ತೆಯಾಗಿದ್ದರು. ಹಿಂದಿನ ಎಲ್ಲ ವರ್ಷಗಳಲ್ಲಿ ನಾಪತ್ತೆ ಪ್ರಕರಣಗಳ ಪೈಕಿ 48,972 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇದು ಈಗ 1,08,234ಕ್ಕೆ ತಲುಪಿದೆ. 2008 ಮತ್ತು 2020ರ ನಡುವಿನ ಮಕ್ಕಳ ನಾಪತ್ತೆ ಪ್ರಕರಣ ವರ್ಷವಾರು 13 ಪಟ್ಟು ಏರಿಕೆಯಾಗಿದೆ. 2008ರಲ್ಲಿ 7.650 ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿತ್ತು.

              ಮಕ್ಕಳ ಪತ್ತೆ ಕಾರ್ಯದಲ್ಲಿ ಎನ್​ಜಿಒಗಳು: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೈಲಾಶ್ ಸತ್ಯಾರ್ಥಿ ಫೌಂಡೇಶನ್​ನ ಸೋದರ ಸಂಸ್ಥೆ ಬಚ್​ಪನ್ ಬಚಾವೋ ಆಂದೋಲನ (ಬಿಬಿಎ) ಕಳೆದ ಎರಡು ವರ್ಷಗಳಲ್ಲಿ ದೇಶಾದ್ಯಂತ ಅಪಹರಣಕಾರರಿಂದ 12,000ದಷ್ಟು ಮಕ್ಕಳನ್ನು ಬಚಾವ್ ಮಾಡಿದೆ. ಮಕ್ಕಳ ಕಳ್ಳಸಾಗಣೆ ಬಹಳ ಪಟ್ಟು ಹೆಚ್ಚಾಗಿರುವುದಕ್ಕೆ ಇದು ನಿದರ್ಶನ ಎಂದು ಬಿಬಿಎಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಧನಂಜಯ ತಿಂಗಳೆ ತಿಳಿಸಿದ್ದಾರೆ. ಚೈಲ್ಡ್ ರೈಟ್ಸ್ ಆಂಡ್ ಯು (ಸಿಆರ್​ವೈ) ಪ್ರಕಟಿಸಿರುವ ಹೊಸ ವರದಿ ಪ್ರಕಾರ, 2021ರಲ್ಲಿ ಮಧ್ಯಪ್ರದೇಶದಲ್ಲಿ ಸರಾಸರಿ 29, ರಾಜಸ್ಥಾನದಲ್ಲಿ 14 ಮಕ್ಕಳು ನಿತ್ಯವೂ ನಾಪತ್ತೆಯಾಗುತ್ತಿದ್ದಾರೆ. ಈ ಮಾಹಿತಿಯನ್ನು ಆರ್​ಟಿಐ ಅರ್ಜಿ ಹಾಕಿ ಸರ್ಕಾರದಿಂದಲೇ ಪಡೆದುಕೊಂಡಿರುವುದಾಗಿ ಸಿಆರ್​ವೈ ಹೇಳಿದೆ.

             ಕೆಲವು ಮಕ್ಕಳನ್ನು ಅವರ ಪಾಲಕರ ಅನುಮತಿ ಮೇರೆಗೆ ಸಾಗಿಸಲಾಗುತ್ತದೆ. ಇನ್ನು ಕೆಲವು ಮಕ್ಕಳು ತಾವಾಗಿಯೇ ಹೋಗಿದ್ದಾರೆ. ಒಟ್ಟಾರೆ ಈ ರೀತಿ ಹೋದವರೆಲ್ಲ ನಾಪತ್ತೆಯಾಗಿರುವುದು ವಾಸ್ತವ. ಹೀಗಾಗಿ ರೈಲ್ವೆ ಉದ್ಯೋಗಿಗಳು, ರಸ್ತೆ ಸಾರಿಗೆ ಸಂಸ್ಥೆ ಉದ್ಯೋಗಿಗಳು ಇಂತಹ ಮಕ್ಕಳನ್ನು ಕಂಡರೆ ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಎಚ್ಚರಿಸಬೇಕು.

                             ಧನಂಜಯ ತಿಂಗಳೆ ಬಿಬಿಎ ಎಕ್ಸಿಕ್ಯೂಟಿವ್ ಡೈರೆಕ್ಟರ್

ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಮೂಲ ಕಾರಣ ಬಡತನ. ಕೋವಿಡ್ ಸಂಕಷ್ಟದ ಕಾರಣ ಅನೇಕ ಕುಟುಂಬಗಳು ಕಡುಬಡತನಕ್ಕೆ ತಳ್ಳಲ್ಪಟ್ಟಿದೆ. ಹೀಗಾಗಿ ಮಕ್ಕಳು ಶಾಲೆಗೆ ಹೋಗಿಲ್ಲ. ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಈ ಸನ್ನಿವೇಶ ಮಕ್ಕಳ ನಾಪತ್ತೆ ಪ್ರಕರಣದ ಜತೆಗೆ ತಳಕು ಹಾಕಿಕೊಂಡಿದೆ.

                          ಪ್ರಭಾತ್ ಕುಮಾರ್ ಡೆಪ್ಯೂಟಿ ಡೈರೆಕ್ಟರ್, ಚೈಲ್ಡ್ ಪ್ರೊಟೆಕ್ಷನ್ ಸೇವ್ ದ ಚಿಲ್ಡ›ನ್

             ಗ್ರಾಮೀಣ ಭಾಗದಲ್ಲಿ ಬಹುತೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕಿವೆ. ಆರ್ಥಿಕ ಹೊರೆ ತಾಳಲಾರದೆ ಒದ್ದಾಡುತ್ತಿವೆ. ಇಂತಹ ಕುಟುಂಬಗಳ ಮಕ್ಕಳು ಕೂಲಿ ಕೆಲಸಕ್ಕೆ, ಹೆಣ್ಣು ಮಕ್ಕಳಾದರೆ ಮದುವೆ ಮುಂತಾದವುಗಳಿಗೆ ತಲೆಯೊಡ್ಡಬೇಕಾಗುತ್ತದೆ. ಈ ರೀತಿಯಾಗಿ ಮಕ್ಕಳು ಕಳೆದು ಹೋಗುತ್ತಿದ್ದಾರೆ.

                      ಸೋಹಾ ಮೊಯಿತ್ರಾ ಸಿಆರ್​ವೈ ಪ್ರಾದೇಶಿಕ ನಿರ್ದೇಶಕಿ

              ಮಾಸ್ಕ್ ವರದಾನ: ಕೋವಿಡ್ 19 ಸಂಕಷ್ಟದ ಸನ್ನಿವೇಶ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇದು ಮಕ್ಕಳ ಕಳ್ಳಸಾಗಣೆದಾರರು ಮತ್ತು ಅಪಹರಣಕಾರರಿಗೆ ವರದಾನವಾಗಿ ಪರಿಣಮಿಸಿದೆ. 2020ರಲ್ಲಿ ದೇಶಾದ್ಯಂತ ಲಾಕ್​ಡೌನ್ ಇದ್ದ ಮಾರ್ಚ್ -ಜೂನ್ ನಡುವೆ 59,262 ಮಕ್ಕಳು (13,566 ಹುಡುಗರು, 45,687 ಹುಡುಗಿಯರು, 9 ತೃತೀಯ ಲಿಂಗಿಗಳು) ನಾಪತ್ತೆಯಾಗಿದ್ದಾರೆ. ಹೆಣ್ಣು ಮಕ್ಕಳ ನಾಪತ್ತೆ ಪ್ರಮಾಣ 2018ರಲ್ಲಿ ಶೇಕಡ 70, 2019ರಲ್ಲಿ ಶೇಕಡ 71, 2020ರಲ್ಲಿ ಶೇಕಡ 77 ಹೆಚ್ಚಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries