ನವದೆಹಲಿ: 2014ಕ್ಕಿಂತ ಮೊದಲು ತಂತ್ರಜ್ಞಾನವನ್ನು ಬಡವರ ವಿರೋಧಿ ಮಾಡಲು ಯತ್ನಗಳು ನಡೆದಿದ್ದವು. ಆದರೆ, ನಾವು ಉತ್ತಮ ಆಡಳಿತದ ಹೊಸ ಮಂತ್ರಗಳನ್ನು ಜಾರಿಗೆ ತಂದಿದ್ದೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
'ಭಾರತ್ ಡ್ರೋಣ್ ಮಹೋತ್ಸವ 2022' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
2014ಕ್ಕಿಂತ ಮೊದಲು ಆಡಳಿತದಲ್ಲಿ ತಂತ್ರಜ್ಞಾನ ಬಳಕೆಯ ಕುರಿತು ನಿರ್ಲಕ್ಷ್ಯಯುತ ವಾತಾವರಣವಿತ್ತು. ಇದರಿಂದಾಗಿ ಬಡವರು, ವಂಚಿತರು, ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದರು. ನಮ್ಮ ಸರ್ಕಾರ ಉತ್ತಮ ಆಡಳಿತದ ಹೊಸ ಮಂತ್ರಗಳನ್ನು ಜಾರಿಗೆ ತರುತ್ತಿದೆ. ನಮ್ಮ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತಿದೆ. ಅವರ ಜೀವನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಇಂದು ಡ್ರೋಣ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಕಂಡುಬರುತ್ತಿರುವ ಉತ್ಸಾಹ ಅದ್ಭುತವಾಗಿದೆ. ಇದು ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನು ಸೂಚಿಸುತ್ತಿದೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಂತ್ರಜ್ಞಾನವನ್ನು ಸಮಸ್ಯೆಯ ಒಂದು ಭಾಗವೆಂದೇ ಪರಿಗಣಿಸಲಾಗಿತ್ತು. ಬಡವರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಇದರಿಂದಾಗಿ 2014ಕ್ಕಿಂತ ಮೊದಲು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ಪರಿಣಾಮ ಬಡವರು, ವಂಚಿತರು, ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಡ್ರೋಣ್ಗಳನ್ನು ಪ್ರಸ್ತುತ ಕಣ್ಗಾವಲು, ಸಮೀಕ್ಷೆ, ಸಾರಿಗೆ, ಕೃಷಿ, ಕ್ರೀಡೆ, ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ದೇಶದಲ್ಲಿ ಡ್ರೋಣ್ ತಂತ್ರಜ್ಞಾನ ಬಳಕೆಯು ದೊಡ್ಡ ಕ್ರಾಂತಿಗೆ ಕಾರಣವಾಗುತ್ತಿದೆ. ಡ್ರೋಣ್ ತಂತ್ರಜ್ಞಾನದ ಅಡಿಯಲ್ಲಿ ಮೊದಲ ಬಾರಿಗೆ ಹಳ್ಳಿಗಳಲ್ಲಿನ ಪ್ರತಿಯೊಂದು ಆಸ್ತಿಯನ್ನು ಡಿಜಿಟಲ್ ಮ್ಯಾಪ್ ಮಾಡಲಾಗುತ್ತಿದೆ ಮತ್ತು ಡಿಜಿಟಲ್ ಆಸ್ತಿ ಕಾರ್ಡ್‌ಗಳನ್ನು ಜನರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಭಾರತ್ ಡ್ರೋಣ್ ಮಹೋತ್ಸವ 2022 ಎರಡು ದಿನಗಳ ಕಾರ್ಯಕ್ರಮವಾಗಿದ್ದು, ಇದನ್ನು ಮೇ 27 ಮತ್ತು 28 ರಂದು ಆಯೋಜಿಸಲಾಗಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟ್‌ಅಪ್‌ಗಳು ಸೇರಿದಂತೆ 1600 ಕ್ಕೂ ಹೆಚ್ಚು ಪ್ರತಿನಿಧಿಗಳು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಪ್ರದರ್ಶನದಲ್ಲಿ ಡ್ರೋಣ್ಗಳ ವಿವಿಧ ಉಪಯೋಗಗಳ ಬಗ್ಗೆ 70ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಜ್ಞಾನವನ್ನು ಪ್ರದರ್ಶಿಸಲಿದ್ದಾರೆ. ಉತ್ಸವವು ಡ್ರೋಣ್ ಪೈಲಟ್ ಪ್ರಮಾಣಪತ್ರಗಳ ವರ್ಚುವಲ್ ವಿತರಣೆ, ಉತ್ಪನ್ನ ಬಿಡುಗಡೆ, ಚರ್ಚೆ, ಪ್ರದರ್ಶನಗಳು, ಮೇಡ್ ಇನ್ ಇಂಡಿಯಾ ಡ್ರೋನ್ ಟ್ಯಾಕ್ಸಿ ಮೂಲಮಾದರಿಗಳ ಪ್ರದರ್ಶನ ಇತರ ಕಾರ್ಯಕ್ರಮಗಳನ್ನು ಒಳಗೊಂಡಿದೆ.