ನವದೆಹಲಿ: 2020 ರಲ್ಲಿ 170 ವಿದೇಶಗಳಲ್ಲಿ 51,000 ಕ್ಕೂ ಹೆಚ್ಚು ಭಾರತೀಯ ಮಕ್ಕಳು ಜನಿಸಿದ್ದು, 10,817 ಮಂದಿ ಭಾರತೀಯರು ವಿದೇಶಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (RGI) ಸಿದ್ಧಪಡಿಸಿದ ಮಾಹಿತಿ ಅನ್ವಯ, '2020ರಲ್ಲಿ 170 ವಿದೇಶಗಳಲ್ಲಿ 51,000 ಕ್ಕೂ ಹೆಚ್ಚು ಭಾರತೀಯ ಮಕ್ಕಳು ಜನಿಸಿದ್ದು, ಈ ಪೈಕಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಗರಿಷ್ಠ ಮಕ್ಕಳ ಜನನವಾಗಿದೆ. ಆದರೆ ಆದೇ ವರ್ಷದಲ್ಲಿ ಸುಮಾರು 10,817 ಭಾರತೀಯರು ವಿದೇಶಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
2020 ರಲ್ಲಿ ವಿದೇಶಿ ನೆಲದಲ್ಲಿ ಭಾರತೀಯ ನಾಗರಿಕರ ಜನನ ಮತ್ತು ಮರಣಗಳನ್ನು ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು ಮತ್ತು ಪೋಸ್ಟ್‌ಗಳಲ್ಲಿ ನೋಂದಾಯಿಸಲಾಗಿದೆ ಎಂದು RGI ಯ ವರದಿ 'ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧರಿಸಿದ ಭಾರತದ ಪ್ರಮುಖ ಅಂಕಿಅಂಶಗಳು' 2020ರಲ್ಲಿ ತಿಳಿಸಿದೆ.
2020 ರಲ್ಲಿ 170 ದೇಶಗಳಲ್ಲಿ 51,089 ಮಕ್ಕಳು ಜನಿಸಿದ್ದು, ಈ ಪೈಕಿ 16,469 ಯುಎಇಯಲ್ಲಿ ಮತ್ತು 6,074 ಸೌದಿ ಅರೇಬಿಯಾದಲ್ಲಿ ಜನಿಸಿದ್ದಾರೆ ಎಂದು ವರದಿ ತಿಳಿಸಿದೆ. ಈ ಮಕ್ಕಳು ಜನಿಸಿದ ಇತರ ದೇಶಗಳ ಪೈಕಿ ಕುವೈತ್ (4,202 ಮಕ್ಕಳು), ಕತಾರ್ (3,936), ಇಟಲಿ (2,352), ಆಸ್ಟ್ರೇಲಿಯಾ (2,316), ಓಮನ್ (2,177), ಬಹ್ರೇನ್ (1,567), ಜರ್ಮನಿ (1,400), ಮತ್ತು ಸಿಂಗಾಪುರ (1,358) ಕೂಡ ಸೇರಿವೆ.
ಸ್ಪೇನ್‌ನಲ್ಲಿ ಒಟ್ಟು 768 ಭಾರತೀಯ ಮಕ್ಕಳು, ದಕ್ಷಿಣ ಆಫ್ರಿಕಾದಲ್ಲಿ 620, ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್)ನಲ್ಲಿ 578, ಸ್ವೀಡನ್‌ನಲ್ಲಿ 388, ಜಾಂಬಿಯಾದಲ್ಲಿ 156, ಯುನೈಟೆಡ್ ಸ್ಟೇಟ್ಸ್ (ಅಮೆರಿಕ)ನಲ್ಲಿ 37 ಮತ್ತು ಪಾಕಿಸ್ತಾನದಲ್ಲಿ ನಾಲ್ಕು ಮಕ್ಕಳು ಜನಿಸಿವೆ.
ವಿದೇಶದಲ್ಲಿ ಸಾವನ್ನಪ್ಪಿದ 10,817 ಭಾರತೀಯರ ಪೈಕಿ ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ಅಂದರೆ 3,754 ಮಂದಿ, ಯುಎಇಯಲ್ಲಿ 2,454, ಕುವೈತ್‌ನಲ್ಲಿ 1,279, ಓಮನ್‌ನಲ್ಲಿ 630, ಕತಾರ್‌ನಲ್ಲಿ 386, ಬಹ್ರೇನ್‌ನಲ್ಲಿ 312, ಅಮೆರಿಕದಲ್ಲಿ 254, ಇಟಲಿಯಲ್ಲಿ 216, ಸಿಂಗಾಪುರದಲ್ಲಿ 166, ಬ್ರಿಟನ್ ನಲ್ಲಿ 166 ಮಂದಿ, ಪಾಕಿಸ್ತಾನದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ವರದಿ ತಿಳಿಸಿದೆ.