ಪುಣೆ: ಪುಣೆಯಲ್ಲಿ ನಡೆದ ಐಪಿಎಲ್-2022 ರ 49 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ 13 ರನ್ ಗಳ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು. 27 ರನ್ ನೀಡಿ ಮೂರು ವಿಕೆಟ್ ಪಡೆದ ಬೌಲರ್ ಮಹೇಶ ತೀಕ್ಸಾನ ಸಿಎಸ್ ಕೆ ಪರ ಉತ್ತಮ ಆಟ ಪ್ರದರ್ಶಿಸಿದರು.
ಆರಂಭಿಕ ಆಟಗಾರರಾದ ವಿರಾಟ್ ಕೋಹ್ಲಿ 33 ಎಸೆತಗಳಲ್ಲಿ 30 ರನ್ ಫಾಫ್ ಡು ಪ್ಲೆಸಿಸ್ 22 ಎಸೆತಗಳಲ್ಲಿ 38 ರನ್ ಗಳಿಸಿದರು. ಮಹಿಪಾಲ್ ಲೊಮ್ರೊರ್ 27 ಎಸೆತಗಳಲ್ಲಿ 42 ರನ್ ದಾಖಲಿಸಿದ್ದು ಆರ್ ಸಿಬಿಗೆ ಹೆಚ್ಚಿನ ಸ್ಕೋರ್ ಗಳಿಸಲು ನೆರವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡ ರುತುರಾಜ್ ಗಾಯಕ್ವಾಡ್ (23 ಎಸೆತಗಳಲ್ಲಿ 28 ರನ್) ಡೆವೊನ್ ಕಾನ್ವೇ 37 ಎಸೆತಗಳಲ್ಲಿ 56 ರನ್ ಗಳ ನೆರವಿನಿಂದ ಉತ್ತಮ ಆರಂಭ ಕಂಡಿತಾದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ರನ್ ಗಳಿಸುವಲ್ಲಿ ವಿಫಲವಾದ ಕಾರಣ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಗೆಲುವಿನ ಮೂಲಕ ಆರ್ ಸಿಬಿ ಅಂಕಪಟ್ಟಿಯಲ್ಲಿ 4 ನೇ ಸ್ಥಾನಕ್ಕೆ ಏರಿದೆ.