ಬೆಂಗಳೂರು: ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಜೈನ್ ಯೂನಿವರ್ಸಿಟಿ 20 ಚಿನ್ನದ ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿದೆ ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಸೋಮವಾರ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಗೌಡ ಅವರು, ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ 20 ಚಿನ್ನದ ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿ ಇದೆ. ಲವ್ಲಿ ವಿಶ್ವವಿದ್ಯಾಲಯ ( ಪಂಜಾಬ್) 12 ಚಿನ್ನದ ಪದಕ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ಇನ್ನೂ 11 ಚಿನ್ನದ ಪದಕ ಗೆಲ್ಲುವ ಮೂಲಕ ಪಂಜಾಬ್ ವಿಶ್ವವಿದ್ಯಾಲಯ ಮೂರನೇ ಸ್ಥಾನದಲ್ಲಿ ಇದೆ ಎಂದು ಮಾಹಿತಿ ನೀಡಿದರು.
ಖೇಲೋ ಇಂಡಿಯಾ ಗೇಮ್ಸ್ ನಲ್ಲಿ ಒಟ್ಟು 3,887 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಒಟ್ಟು 261 ಚಿನ್ನ, 261 ಬೆಳ್ಳಿ ಹಾಗೂ 365 ಕಂಚಿನ ಪದಕಗಳಿಗೆ ಸ್ಪರ್ಧೆ ನಡೆದಿದೆ. ಕರ್ನಾಟಕದಿಂದ ಒಟ್ಟು 16 ವಿಶ್ವವಿದ್ಯಾಲಯ ಭಾಗವಹಿಸಿವೆ ಎಂದರು.
ನಾಳೆ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನಲೆಯಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಮೊದಲು ನಾವು ಹೊರಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ಮಾಡಲು ತೀರ್ಮಾನ ಮಾಡಿದ್ವಿ ಎಂದು ಸಚಿವರು ಹೇಳಿದರು.