ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 24 ರನ್ ಅಂತರದ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಭಾನುವಾರ ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್, ಆರು ವಿಕೆಟ್ ನಷ್ಟಕ್ಕೆ 178 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ಬಳಿಕ ಟ್ರೆಂಟ್ ಬೌಲ್ಟ್ (18ಕ್ಕೆ 2) ಹಾಗೂ ರವಿಚಂದ್ರನ್ ಅಶ್ವಿನ್ (24ಕ್ಕೆ 1) ಸೇರಿದಂತೆ ರಾಜಸ್ಥಾನ್ ಬೌಲರ್‌ಗಳ ದಾಳಿಗೆ ನಲುಗಿದ ಲಖನೌ ಎಂಟು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ ಲಖನೌಸೂಪರ್ ಜೈಂಟ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡ 24ರನ್ ಗಳ ಭರ್ಜರಿ ಜಯ ಸಾಧಿಸಿತು.
ಇದರೊಂದಿಗೆ ಅಂಕಪಟ್ಟಿಯಲ್ಲಿ ಲಖನೌ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿರುವ ರಾಜಸ್ಥಾನ್, ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್, ಆಡಿರುವ 13 ಪಂದ್ಯಗಳಲ್ಲಿ ಎಂಟನೇ ಜಯದೊಂದಿಗೆ ಒಟ್ಟು 16 ಅಂಕ ಗಳಿಸಿದೆ. ಲಖನೌ ಸಹ 13 ಪಂದ್ಯಗಳಲ್ಲಿ 16 ಅಂಕ ಹೊಂದಿದೆ.