ಐಪಿಎಲ್-2022 ರ ಆವೃತ್ತಿಯಲ್ಲಿ ಮೇ.06 ರಂದು ಮುಂಬೈ-ಗುಜರಾತ್ ತಂಡಗಳ ನಡುವಿನ ಪಂದ್ಯದ ಕೊನೆಯ ಹಂತದಲ್ಲಿ ರೋಚಕ ತಿರುವು ಪಡೆದುಕೊಂಡು ಅಂತಿಮವಾಗಿ ಮುಂಬೈಗೆ ಜಯ ಒಲಿಯಿತು.
ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರರಾದ ಇಶಾನ್ ಕಿಶನ್ 29 ಎಸೆತಗಳಲ್ಲಿ 45 ರನ್ ಗಳು, ರೋಹಿತ್ ಶರ್ಮಾ 28 ಎಸೆತಗಳಲ್ಲಿ 43 ರನ್ ಗಳು ಗಳಿಸಿ ಉತ್ತಮ ಆರಂಭ ನೀಡಿದರು. ನಂತರ ಬಂದ ಬ್ಯಾಟ್ಸ್ಮನ್ ಗಳು ಮಂಕಾದರಾದರೂ ಟಿಮ್ ಡೇವಿಡ್ 21 ಎಸೆತಗಳಲ್ಲಿ 44 ರನ್ ಗಳಿಸಿ ತಂಡದ ಸ್ಕೋರ್ ಏರಿಕೆಗೆ ನೆರವಾದರು. ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಎದುರಾಳಿ ತಂಡಕ್ಕೆ 178 ರನ್ ಟಾರ್ಗೆಟ್ ನೀಡಿತ್ತು.
ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಾಹ (55) ರನ್ ಶುಭ್ ಮನ್ ಗಿಲ್ (52ರನ್) ಗಳ ಭರ್ಜರಿ ಜೊತೆಯಾಟದಿಂದ ವಿಕೆಟ್ ನಷ್ಟವಿಲ್ಲದೇ 106 ರನ್ ಗಳಿಸಲು ಸಾಧ್ಯವಾಯಿತು. ಆದರೆ ಅಶ್ವಿನ್ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿ ಅದೃಷ್ಟವನ್ನು ಮುಂಬೈ ಇಂಡಿಯನ್ಸ್ ತಂಡದತ್ತ ತಿರುಗಿಸಿತು.
ಶುಭ್ ಮನ್-ವೃದ್ಧಿಮಾನ್ ಸಾಹ ಬಳಿಕ ಉತ್ತಮ ಜೊತೆಯಾಟ ಕಟ್ಟುವಲ್ಲಿ ಗುಜರಾತ್ ಬ್ಯಾಟ್ಸ್ಮನ್ ಗಳು ವಿಫಲರಾದರು. ಹಾರ್ದಿಕ್ ಪಾಂಡ್ಯ ಹಾಗೂ ರಾಹುಲ್ ತೆವಾಟಿಯಾ ನಿರ್ಣಾಯಕ ಹಂತದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ ಗಳ ಎದುರು ಮಂಕಾದರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡ 5 ರನ್ ಗಳ ಗೆಲುವು ಸಾಧಿಸಿದೆ.