ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಮುಗ್ಗರಿಸಿದ್ದು, ಗುಜರಾತ್ ಟೈಟನ್ಸ್ ತಂಡ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಇಂದು ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗುಜರಾತ್ ಟೈಟನ್ಸ್ ತಂಡವು ಭಾನುವಾರ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿರುವ ಹಾರ್ದಿಕ್ ಪಾಂಡ್ಯ ಬಳಗವು, 'ಕ್ವಾಲಿಫೈಯರ್ 1'ರಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಋತುರಾಜ್ ಗಾಯಕವಾಡ್ ಅರ್ಧಶತಕದ (53) ಹೊರತಾಗಿಯೂ ಐದು ವಿಕೆಟ್ ನಷ್ಟಕ್ಕೆ ನಿಗಧಿತ 20 ಓವರ್ ಗಳಲ್ಲಿ ಕೇವಲ 133 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಗುರಿಯನ್ನು ಬೆನ್ನು ಹತ್ತಿದ ಗುಜರಾತ್ ತಂಡ ವೃದ್ಧಿಮಾನ್ ಸಹಾ ಅಜೇಯ ಅರ್ಧಶತಕದ (67*) ನೆರವಿನಿಂದ 19.1 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸಹಾ ಹಾಗೂ ಶುಭಮನ್ ಗಿಲ್ (18) ಮೊದಲ ವಿಕೆಟ್‌ಗೆ 59 ರನ್ ಒಟ್ಟು ಸೇರಿಸಿದರು. ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು. ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಸಹಾ ಅರ್ಧಶತಕ ಸಾಧನೆ ಮಾಡಿದರು. 57 ಎಸೆತಗಳನ್ನು ಎದುರಿಸಿದ ಸಹಾ 67 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು.