ನವದೆಹಲಿ: ವೈದ್ಯರ ಮನವಿಯ ಮೇರೆಗೆ ನೀಟ್-ಪಿಜಿ-2022 ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಪರೀಕ್ಷೆ ವಿಳಂಬವಾದರೆ ವೈದ್ಯರ ಅಲಭ್ಯತೆ ಉಂಟಾಗುತ್ತದೆ ಮತ್ತು ರೋಗಿಗಳ ಆರೈಕೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ನೀಟ್ ಪಿಜಿ-2022 ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠ, ಪರೀಕ್ಷೆ ಮುಂದೂಡುವುದರಿಂದ "ಅವ್ಯವಸ್ಥೆ ಮತ್ತು ಅನಿಶ್ಚಿತತೆ" ಸೃಷ್ಟಿಸುತ್ತದೆ ಮತ್ತು ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳ ದೊಡ್ಡ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.
"ವಿದ್ಯಾರ್ಥಿಗಳಲ್ಲಿ ಎರಡು ವರ್ಗಗಳಿವೆ - ಒಂದು ಮುಂದೂಡಿಕೆಯನ್ನು ಬಯಸುತ್ತಿದೆ ಮತ್ತು ಪರೀಕ್ಷೆಗೆ ನೋಂದಾಯಿಸಿಕೊಂಡ ಎರಡು ಲಕ್ಷದ ಆರು ಸಾವಿರ ಅಭ್ಯರ್ಥಿಗಳ ದೊಡ್ಡ ವರ್ಗ - ಪರೀಕ್ಷೆ ಬರೆಯಲು ಸಿದ್ಧವಾಗಿದೆ" ಎಂದು ಸುಪ್ರೀಂ ಪೀಠ ಹೇಳಿದೆ.
ಕಳೆದ ಶುಕ್ರವಾರವಷ್ಟೇ 15,000 ಅಭ್ಯರ್ಥಿಗಳು ಮೇ 21ಕ್ಕೆ ನಿಗದಿಯಾಗಿರುವ 2022ನೇ ಸಾಲಿನ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಪ್ರಧಾನಿ ಮೋದಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಅಲ್ಲದೆ ನೀಟ್-ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.