ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2022 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಏಳು ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಗುಜರಾತ್ ಟೈಟನ್ಸ್ ಫೈನಲ್ ಗೆ ಲಗ್ಗೆಯಿಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ರಾಜಸ್ಥಾನ ರಾಯಲ್ಸ್ ಪರ ಜೋಸ್ ಬಟ್ಲರ್ 56 ಎಸೆತಗಳಲ್ಲಿ 89, ಸಂಜು ಸ್ಯಾಮ್ಸನ್ 47, ದೇವದತ್ ಪಡಿಕ್ಕಲ್ 28 ರನ್ ಗಳಿಸಿದರು. ಗುಜರಾತ್ ಟೈಟನ್ಸ್ ಪರ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಹಾಗೂ ರವಿ ಶ್ರೀನಿವಾಸನ್ ಸಾಯಿ ಕಿಶೋರ್ ತಲಾ ಒಂದು ವಿಕೆಟ್ ಪಡೆದರು.
ರಾಜಸ್ಥಾನ ರಾಯಲ್ಸ್ ನೀಡಿದ 189 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ 19.3 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಗುಜರಾತ್ ಟೈಟನ್ಸ್ ಪರ ಡೇವಿಡ್ ಮಿಲ್ಲರ್ 68, ಹಾರ್ದಿಕ್ ಪಾಂಡ್ಯ 40, ಶುಭ್ ಮನ್ ಗಿಲ್ 35 ರನ್ ಗಳಿಸಿದರು. ರಾಜಸ್ಥಾನ ರಾಯಲ್ಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಒಬೆಡ್ ಮೆಕಾಯ್ ತಲಾ ಒಂದು ವಿಕೆಟ್ ಪಡೆದರು.