ವಾಷಿಂಗ್ಟನ್: 2047ರ ವೇಳೆ ಭಾರತದಲ್ಲಿ ಪ್ರತಿ ಮಗುವೂ ಸುರಕ್ಷಿತ ಹಾಗೂ ಉಚಿತ ಶಿಕ್ಷಣ ಪಡೆಯಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಪಿಟಿಐ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧದ ಹೋರಾಟ ಹೆಚ್ಚು ಉತ್ತಮವಾಗಿದೆ ಎಂದು ಹೇಳಿದ್ದಾರೆ.
2047ರಲ್ಲಿ ಭಾರತ 100ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ಈ ವೇಳೆಗೆ ದೇಶದ ಕಟ್ಟ ಕಡೆಯ ಮಗುವಿಗೂ ಸುರಕ್ಷತೆ ಮತ್ತು ಉಚಿತ ಶಿಕ್ಷಣ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಬಾಲ ಕಾರ್ಮಿಕ ಪದ್ಧತಿ ಕೊನೆಗೊಳಿಸಲು ಸಾಮಾಜಿಕ ಮತ್ತು ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ಸರ್ಕಾರಕ್ಕೆ ಸಮಾಜ ಮತ್ತು ಖಾಸಗಿ ವಲಯದ ಬೆಂಬಲ ಬೇಕಾಗುತ್ತದೆ ಎಂದು ಸತ್ಯಾರ್ಥಿ ಪ್ರತಿಪಾದಿಸಿದ್ದಾರೆ.
ನಾನು ಸಮಾಜದ ಕೊನೆಯ ವ್ಯಕ್ತಿಯ ಬಗ್ಗೆ ಮಾತನಾಡುವಾಗ ನನ್ನ ದೃಷ್ಟಿ ಮಹಾತ್ಮ ಗಾಂಧಿಯಿಂದ ಪ್ರೇರಿತವಾಗಿದೆ. ಭಾರತವು ಅದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಉತ್ತರ ಪ್ರದೇಶ ಅಥವಾ ಬಿಹಾರದ ದೂರದ ಹಳ್ಳಿಯ ಬಾಲಕಿಯೊಬ್ಬರು ಶಾಲೆಗೆ ಹೋಗಲು ಸ್ವತಂತ್ರಳಾಗಿದ್ದಾಳೆ ಮತ್ತು ತನ್ನ ಕನಸುಗಳನ್ನು ನನಸಾಗಿಸಲು ಅವಕಾಶಗಳನ್ನು ಪಡೆದ ದಿನ ಭಾರತವು ಪೂರ್ಣವಾಗಿ ಸ್ವಾತಂತ್ರ್ಯ ಸಾಧಿಸುತ್ತದೆ ಎಂದು ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ.
ಬಾಲ ಕಾರ್ಮಿಕ ಪದ್ಧತಿ ವಿರುದ್ಧದ ಹೋರಾಟದ ವಿಚಾರದಲ್ಲಿ ಭಾರತವು ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಾಧನೆ ಮಾಡಿದೆ ಎಂದಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ಆರೋಗ್ಯ ಅಥವಾ ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಇಡೀ ನಾಗರಿಕತೆ ಮತ್ತು ಮಕ್ಕಳು ಹೆಚ್ಚು ಬಳಲುತ್ತಿದ್ದಾರೆ ಎಂದು ಸತ್ಯಾರ್ಥಿ ಹೇಳಿದ್ದಾರೆ.