ಕಾಸರಗೋಡು: ಕುಂಬಳೆ ಸೀಮೆಯ ಪ್ರಮುಖ ಉಪ ದೇವಸ್ಥಾನಗಳಲ್ಲಿ ಒಂದಾದ ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಹಾಗೂ ಶಾಸ್ತಾರನಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೇ 20ರಿಂದ 25ರ ವರೆಗೆ ಜರುಗಲಿರುವುದಾಗಿ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ ತಿಳಿಸಿದ್ದಾರೆ. ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿರುವುದು.25 ರಂದು ನೂರ ಎಂಟು ಕಾಯಿ ಗಣಹೋಮ, ಬೆಳಗ್ಗೆ 7.30 ರಿಂದ 8.03 ರ ನಡುವಿನ ಶುಭಮುಹೂರ್ತದಲ್ಲಿ ಒಳಸುಬ್ರಹ್ಮಣ್ಯ ಸ್ವಾಮಿಯ ಹಾಗೂ ಶಾಸ್ತಾರನ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು.
ಮೇ 20ರಂದು ಎಡನೀರು ಮಠಾಧೀಶ ಶ್ರೀ ಸಚ್ವಿದಾನಂದ ಭಾರತೀ ಸ್ವಾಮಿಗಳವರು ಧಾರ್ಮಿಕ ಸಭೆಯನ್ನು ಉದ್ಘಾಟಿಸುವರು. ಎಲ್ಲಾ ದಿನಗಳಲ್ಲೂ ಧಾರ್ಮಿಕ ಸಭೆ, ಭಜನೆ,ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ಯಕ್ಷಗಾನ ಬಯಲಾಟ,ಭಕ್ತಿ ಸಂಗೀತ, ರಸಮಂಜರಿ ಸೇರಿದಂತೆ ಕಾರ್ಯಕ್ರಮ ವೈವಿಧ್ಯ ನಡೆಯಲಿರುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಕೆ ಆರ್ ಪೆಜತ್ತಾಯ, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಅಶೋಕ ರೈ, ಸುಕುಮಾರ್ ಕುದ್ರೆಪ್ಪಾಡಿ, ಕಾರ್ಯಾಧ್ಯಕ್ಷ ಕೆಮಹಾಬಲ ಶೆಟ್ಟಿ ಭಾಗವಹಿಸಿದ್ದರು.