ಕೊಚ್ಚಿ: ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರು ಕೇರಳದಲ್ಲಿ ಆಮ್ ಆದ್ಮಿ ಪಕ್ಷ-ಟ್ವೆಂಟಿ-20 ಮೈತ್ರಿಯನ್ನು ಘೋಷಿಸಿದ್ದಾರೆ. ಈ ಮುಂದಾಳತ್ವವನ್ನು ಜನ ಕಲ್ಯಾಣ ಒಕ್ಕೂಟ ಎಂದು ಕರೆಯುತ್ತಾರೆ. ಭವಿಷ್ಯದಲ್ಲಿ ಕೇರಳದಲ್ಲೂ ಸರ್ಕಾರ ರಚಿಸಬಹುದು ಎಂದರು. ಕಿಳಕಂಬಲಂನಲ್ಲಿ ನಿನ್ನೆ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅದೇ ಮಾದರಿಯಲ್ಲಿ ಕೇರಳ ಹೊಸ ರಂಗಕ್ಕೆ ಸೇರಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಮೈತ್ರಿ ಕೇರಳದಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದ್ದು, 3.5 ಕೋಟಿ ಮಲಯಾಳಿಗಳ ಮೈತ್ರಿಯಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಸಾಬು ಎಂ ಜೇಕಬ್ ಅವರ ಅದ್ಭುತ ನಾಯಕತ್ವದಲ್ಲಿ ಟ್ವೆಂಟಿ-20 ಅಪ್ರತಿಮ ಜಿಗಿತವನ್ನು ಮಾಡಿತು. ಹೊಸ ಮೈತ್ರಿಕೂಟದಲ್ಲೂ ಇದು ಪುನರಾವರ್ತನೆಯಾಗಲಿದೆ ಎಂದು ತಿಳಿಸಿದರು.
ಹತ್ತು ವರ್ಷಗಳ ಹಿಂದೆ ಯಾರಿಗೂ ಕೇಜ್ರಿವಾಲ್ ಗೊತ್ತಿರಲಿಲ್ಲ. ಆದರೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಒಂದು ವರ್ಷದೊಳಗೆ ಸರ್ಕಾರ ರಚಿಸಿತು. ಅದು ದೇವರ ಮಾಯೆ. ಕೇರಳದಲ್ಲೂ ಈ ಮ್ಯಾಜಿಕ್ ಸಾಧ್ಯವಾಗಲಿದೆ ಎಂದ ಕೇಜ್ರಿವಾಲ್, ದೆಹಲಿಗೆ ಉಚಿತ ವಿದ್ಯುತ್, ವೈದ್ಯಕೀಯ ಚಿಕಿತ್ಸೆ, ನೀರು, ಶಿಕ್ಷಣ ನೀಡಲು ಆಮ್ ಆದ್ಮಿ ಪಕ್ಷಕ್ಕೆ ಸಾಧ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಕೇರಳದಲ್ಲೂ ಇಂತಹ ಅ|ಭಿವೃದ್ದಿ ಜಾರಿಯಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.