ಉದಯಪುರ: ಕೇಂದ್ರ ಸರ್ಕಾರದ ನೀತಿಗಳು ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಎರಡನೇ ಹಂತದ ಹೋರಾಟದ ರೂಪುರೇಷೆ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಶನಿವಾರ ಚರ್ಚಿಸಲಾಯಿತು.
ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆಯನ್ನು ಸೋನಿಯಾ ವಹಿಸಿದ್ದರು. ಸಭೆಯಲ್ಲಿ ರಾಹುಲ್ ಗಾಂಧಿ ಕೂಡಾ ಮಾತನಾಡಿದ್ದು, ಜನ ಜಾಗರಣ ಅಭಿಯಾನದ ಮುಂದಿನ ಹಂತದ ಹೋರಾಟಕ್ಕಾಗಿ ಯೋಜನೆ ರೂಪಿಸಲು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಸಂಕಷ್ಟ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಕಳೆದ ವರ್ಷ ನವೆಂಬರ್ 14 ರಿಂದ ನವೆಂಬರ್ 29ರವರೆಗೂ ಜನ ಜಾಗರಣ ಅಭಿಯಾನ ಸಾಮೂಹಿಕ ಹೋರಾಟವನ್ನು ಕಾಂಗ್ರೆಸ್ ಆರಂಭಿಸಿತ್ತು. ಇದೀಗ ಜನ ಜಾಗರಣ ಅಭಿಯಾನ 2.0 ಆರಂಭಿಸಲು ಪಕ್ಷ ಯೋಜಿಸುತ್ತಿದೆ.
ಕಳೆಗುಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಿನ್ನೆಯಿಂದ ಆರಂಭವಾಗಿರುವ ಚಿಂತನಾ ಶಿಬಿರದಲ್ಲಿ ದೇಶಾದ್ಯಂತ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದಾರೆ.