ಅಲಹಾಬಾದ್: ಆಗ್ರಾದಲ್ಲಿನ ತಾಜ್ ಮಹಲ್‍ನಲ್ಲಿ ಹಿಂದು ದೇವರ ವಿಗ್ರಹಗಳು ಅಥವಾ ಗ್ರಂಥಗಳಿವೆಯೇ ಎಂದು ಪರಿಶೀಲಿಸಲು ಅಲ್ಲಿನ 20 ಕೊಠಡಿಗಳನ್ನು ತೆರೆದು ಭಾರತದ ಪುರಾತತ್ವ ಸರ್ವೇಕ್ಷಣಾಲಯಕ್ಕೆ ಪರಿಶೀಲಿಸುವಂತೆ ಆದೇಶಿಸಬೇಕೆಂದು ಕೋರಿ ಅಯ್ಯೋಧ್ಯೆಯಲ್ಲಿ ಬಿಜೆಪಿಯ ಮಾಧ್ಯಮ ಕೇಂದ್ರದ ಉಸ್ತುವಾರಿಯಾಗಿರುವ ರಜನೀಶ್ ಸಿಂಗ್ ಎಂಬವರು ಅಲಹಾಬಾದ್ ಹೈಕೋರ್ಟಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ.
ತಾಜ್ ಮಹಲ್ ವಾಸ್ತವವಾಗಿ ಹಿಂದು ದೇವರಾದ ಶಿವನಿಗೆ ಮುಡಿಪಾದ ಹಳೆಯ ದೇವಸ್ಥಾನವಾಗಿತ್ತು ಹಾಗೂ ತೇಜೋ ಮಹಾಲಯ ಎಂದು ತಿಳಿಯಲಾಗಿತ್ತು ಎಂದು ಹಲವು ಹಿಂದುತ್ವ ಗುಂಪುಗಳು ಹೇಳುತ್ತಿವೆ, ಇದನ್ನು ಹಲವು ಇತಿಹಾಸತಜ್ಞರೂ ಪುಷ್ಠೀಕರಿಸಿದ್ದಾರೆ, ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದು ಹಿಂದುಗಳು ಮತ್ತು ಮುಸ್ಲಿಮರ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ ಹಾಗೂ ಈ ವಿವಾದಕ್ಕೆ ಅಂತ್ಯ ಹಾಡಬೇಕಿದೆ ಎಂದು ಅರ್ಜಿಐಲ್ಲಿ ತಿಳಿಸಲಾಗಿದೆ.
"ತಾಜ್ ಮಹಲ್ ಅನ್ನು ಶಾಹ್ ಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ಸ್ಮರಣಾರ್ಥ ಕಟ್ಟಿಸಿದ್ದ ಎಂದು ಹೇಳಲಾಗಿದೆ ಆದರೆ ಹಲವು ಪುಸ್ತಕಗಳಲ್ಲಿ ಆತನ ಪತ್ನಿಯ ಹೆಸರು ಮುಮ್ತಾಜ್-ಉಲ್ ಝಮಾನಿ ಎಂದು ಬರೆಯಲಾಗಿದೆ ಮೇಲಾಗಿ ಇದರ ನಿರ್ಮಾಣಕ್ಕೆ 22 ವರ್ಷ ತಗಲಿದೆ ಎಂಬುದು ಅಸಂಬದ್ಧ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
"ರಾಜ ಪರಮಾರ್ದಿ ದೇವ್ ಎಂಬಾತ ತೇಜೋ ಮಹಾಲಯ ದೇವಸ್ಥಾನ ಅರಮನೆಯನ್ನು ಕ್ರಿಸ್ತಶಕ 1212ರಲ್ಲಿ ನಿರ್ಮಿಸಿದ್ದ ಮುಂದೆ 1632ರಲ್ಲಿ ಶಾಹ್ ಜಹಾನ್ ಅದನ್ನು ಆಕ್ರಮಿಸಿ ಅದನ್ನು ತನ್ನ ಪತ್ನಿಯ ಸ್ಮಾರಕವಾಗಿ ಪರಿವರ್ತಿಸಿದ್ದ, ಈ ಸ್ಮಾರಕದ ಸಂರಕ್ಷಣೆಗೆ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿರುವುದರಿಂದ ಅದರ ಕುರಿತು ಐತಿಹಾಸಿಕ ವಾಸ್ತವಗಳನ್ನು ಜನರ ಮುಂದಿಡುವುದು ಅಗತ್ಯ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.