ನವದೆಹಲಿ:ದೇಶಾದ್ಯಂತ ಮೇ 21 ಅನ್ನು “ಭಯೋತ್ಪಾದನೆ ನಿಗ್ರಹ ದಿನ’ವಾಗಿ ಆಚರಿಸುವಂತೆ ಸೂಚಿಸಿ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಸಚಿವಾಲಯಗಳಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ.
ಈ ನಿಟ್ಟಿನಲ್ಲಿ “ತುರ್ತು ಕ್ರಮ’ ಕೈಗೊಳ್ಳುವಂತೆಯೂ ಪತ್ರದಲ್ಲಿ ಸೂಚಿಸಲಾಗಿದೆ. “ಪ್ರತಿ ವರ್ಷ ಮೇ 21 ಅನ್ನು ಭಯೋತ್ಪಾದನೆ ನಿಗ್ರಹ ದಿನವಾಗಿ ಆಚರಿಸಬೇಕು. ಉಗ್ರವಾದವು ಹೇಗೆ ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ ಎಂಬುದನ್ನು ತೋರಿಸುವ ಮೂಲಕ ದೇಶದ ಯುವಕರನ್ನು ಉಗ್ರವಾದದಿಂದ, ಹಿಂಸಾಚಾರದಿಂದ ದೂರವಿಡುವಂತೆ ನೋಡಿಕೊಳ್ಳುವುದೇ ಈ ದಿನದ ಆಚರಣೆಯ ಉದ್ದೇಶವಾಗಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆ ದಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಇತರೆ ಸಾರ್ವಜನಿಕ ಸಂಸ್ಥೆಗಳಲ್ಲಿ ಉಗ್ರ ನಿಗ್ರಹ ಶಪಥವನ್ನು ಕೈಗೊಳ್ಳಬೇಕು. ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕವೂ ಭಯೋತ್ಪಾದನೆ ನಿರ್ಮೂಲನೆಯ ಸಂದೇಶಗಳನ್ನು ರವಾನಿಸಬೇಕು ಎಂದೂ ಸೂಚಿಸಲಾಗಿದೆ.