ಪೊಖಾರಾ: ವಾರಾಂತ್ಯದಲ್ಲಿ ಹಿಮಾಲಯ ಕಣಿವೆ ಪ್ರದೇಶದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ 22 ಪ್ರಯಾಣಿಕರ ಮೃತದೇಹವನ್ನು ನೇಪಾಳದ ರಕ್ಷಣಾ ಸಿಬ್ಬಂದಿ ವಶಕ್ಕೆ ಪಡೆದಿರುವುದಾಗಿ ಸೇನೆ ಸೋಮವಾರ ತಿಳಿಸಿದೆ.
ಪೊಖಾರದಿಂದ ಪ್ರಸಿದ್ದ ಟ್ರೆಕ್ಕಿಂಗ್ ತಾಣ ಜಾಮ್ ಸಾಮ್ ಕಡೆಗೆ ಭಾನುವಾರ ಬೆಳಗ್ಗೆ ತೆರಳುತ್ತಿದ್ದ ನೇಪಾಳದ ತಾರಾ ಏರ್ಗೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಭಾನುವಾರ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಸೋಮವಾರ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದಾಗ 9ಎನ್-ಎಇಟಿ ನೋಂದಣಿ ಸಂಖ್ಯೆಯೊಂದಿಗೆ ಸ್ಪಷ್ಟವಾಗಿ ಗೋಚರಿಸುವ ವಿಮಾನದ ರೆಕ್ಕೆ ಮತ್ತಿತರ ಅವಶೇಷಗಳ ಫೋಟೋಗಳನ್ನು ಸೇನೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿತ್ತು.
21 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದಿರುವ ಒಬ್ಬ ಪ್ರಯಾಣಿಕರ ಪತ್ತೆಯಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನೇಪಾಳ ಸೇನಾ ವಕ್ತಾರ ನಾರಾಯಣ್ ಸಿಲ್ ವಾಲ್ ಹೇಳಿದ್ದಾರೆ. ಸೇನೆ, ಪೊಲೀಸ್, ಪರ್ವತಾ ಮಾರ್ಗದರ್ಶಕರು, ಸ್ಥಳೀಯರು ಸೇರಿದಂತೆ ಸುಮಾರು 60 ಜನರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಮಾನವು ಪರ್ವತ ಪ್ರದೇಶದಲ್ಲಿ ದೊಡ್ಡ ಬಂಡೆಗೆ ಹೊಡೆದಿದೆ ಎಂದು ಪೊಖಾರಾ ವಿಮಾನ ನಿಲ್ದಾಣದ ವಕ್ತಾರ ದೇವ್ ರಾಜ್ ಸುಬೇದಿ ಹೇಳಿದ್ದಾರೆ.
ಅಪಘಾತಕ್ಕೀಡಾದ ವಿಮಾನದಲ್ಲಿ ನಾಲ್ವರು ಭಾರತೀಯರು, ಇಬ್ಬರು ಜರ್ಮನಿಯರು, ಅಮೆರಿಕದಿಂದ ಬಂದ ಕಂಪ್ಯೂಟರ್ ಎಂಜಿನಿಯರ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ನೇಪಾಳದ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕುಟುಂಬದೊಂದಿಗೆ ರಜೆ ಕಳೆಯಲು ಹೋಗುತ್ತಿದ್ದ ನಾಲ್ವರು ಭಾರತೀಯರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಭಾರತೀಯ ಪೊಲೀಸ್ ಅಧಿಕಾರಿ ಉತ್ತಮ್ ಸೋನಾವಾನೆ ತಿಳಿಸಿದ್ದಾರೆ.