ಜಮ್ಮು: ಜಮ್ಮುವಿನ ಕತ್ರಾ ಬಳಿ ವೈಷ್ಣೋದೇವಿ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿರುವ ಘೋರ ದುರಂತ ಶುಕ್ರವಾರ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ.
ವೈಷ್ಣೋದೇವಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಕತ್ರಾದಿಂದ ಜಮ್ಮುವಿಗೆ ತೆರಳುತ್ತಿದ್ದಾಗ ಹಠಾತ್ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.
ಸಾವುಗಳನ್ನು ಖಚಿತಪಡಿಸಿದ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿ) ಮುಖೇಶ್ ಸಿಂಗ್, ಆರಂಭಿಕ ತನಿಖೆಯಲ್ಲಿ ಯಾವುದೇ ಸ್ಫೋಟಕ ಬಳಸಿರುವುದು ಕಂಡುಬಂದಿಲ್ಲ. ಆದರೆ ತಕ್ಷಣವೇ ವಿಧಿವಿಜ್ಞಾನ ತಜ್ಞರು ಬೆಂಕಿಗೆ ಕಾರಣ ತಿಳಿಯಲು ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಕತ್ರಾ ಮೂಲ ಶಿಬಿರವಾಗಿದೆ.